ಪ್ರತಿವರ್ಷದಂತೆ ವರ್ಷ, ಕಾರ್ತೀಕ ಮಾಸದ ಕೊನೆಯ
ಸೋಮವಾರ, ಸುಂಕೇನ ಹಳ್ಳಿ ಎಂದು ಕರೆಯಲಾಗುತ್ತಿದ್ದ, ಬೆಂಗಳೂರಿನ ಬಸವನಗುಡಿಯಲ್ಲಿ ಪಾರಂಪಾರಿಕ ಕಡಲೆಕಾಯಿ
ಪರಿಷೆ ನಡೆಯುತ್ತದೆ. ಬಸವನಗುಡಿಯ ಬೃಹತ್ ದೇವಲಯದಲ್ಲಿ ವಿಶೇಷಪೂಜೆ ಹಾಗೂ ಹೂವಿನ ಅಲಂಕಾರವನ್ನು ಮಾಡಿ,
ಭಕ್ತರಿಗೆಲ್ಲಾ ಉಚಿತವಾಗಿ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುವದು. ಭಕ್ತರು, ದೇಗುಲದ ಪ್ರಾಂಗಣದಲ್ಲೆ
ಕಡಲೆಕಾಯಿ ಪ್ರಸಾದವನ್ನು ಸೇವಿಸಬೇಕೆಂಬ ನಂಬಿಕೆ ಜನರಿಗಿದೆ. ಇದಕ್ಕೆ ಮೊದಲು, ದೇವಾಲಯದ ಮುಂದೆ ವಿಶೇಷವಾಗಿ
ನಿರ್ಮಿಸಿದ್ದ ಪೆಂಡಾಲಿನಲ್ಲಿ ಕಡಲೆಕಾಯಿಯನ್ನು ತಕ್ಕಡಿಯಲ್ಲಿ ಸಾಂಕೇತಿಕವಾಗಿ ತೂಕಮಾಡಿ, ಭಕ್ತರಿಗೆಲ್ಲಾ
ಹಂಚಲಾಗುವದು. ಕೇವಲ ಕಡಲೆ ಕಾಯಿ ಪರಿಷೆ ಮಾತ್ರವಲ್ಲದೇ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಿಕೆಗಳು
ಇರುತ್ತವೆ.
ಪರಿಷೆಯ ವಿಶೇಷತೆ
ಬಡವರ ಬಾದಾಮಿಯೆಂದೇ ಹೆಸರಾದ ಕಡಲೆಕಾಯಿಯನ್ನು
ತಿನ್ನುತ್ತಾ, ಚುಮು-ಚುಮು ಚಳಿಯಲ್ಲಿ ಪರಿವಾರದೊಂದಿಗೆ, ಗೆಳೆಯರ ಸಹಿತ, ಬಸವನಗುಡಿಯಲ್ಲಿ ಅಲೆಯುವುದೇ
ಈ ಪರಿಷೆಯ ಒಂದು ಅನನ್ಯ ವಿಧಿಗಳಲ್ಲೊಂದು. ಬೆಳೆಗಾರ ಹಾಗೂ ಗ್ರಾಹಕನನ್ನು ಒಂದು ಗೂಡಿಸುವುದು ಕೂಡ
ಈ ಜಾತ್ರೆಯ ವಿಶೇಷ. ಬೆಂಗಳೂರಿನ ಸುತ್ತಮುತ್ತಲ ಕಡಲೆಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ಬಸವಣ್ಣನಿಗೆ
ಅರ್ಪಿಸಿ ಬೆಳೆದ ಶ್ರಮಕ್ಕೆ ಪ್ರತಿಫಲ ಪಡೆಯಲು ರಸ್ತೆ ಅಂಚಲ್ಲಿ ಕಡಲೆಕಾಯಿ ರಾಶಿ ಸುರಿದು ಗ್ರಾಹಕರ
ನೀರಿಕ್ಷೆಯಲ್ಲಿರುತ್ತಾರೆ.
ಪೌರಾಣಿಕ ಹಿನ್ನೆಲೆ
ಬೆಂಗಳೂರಿನ ಬಸವನಗುಡಿ ಬಡಾವಣೆಗೆ ಹಿಂದೆ ಸುಂಕೇನಹಳ್ಳಿ
ಎಂಬ ಹೆಸರಿತ್ತು. ಇದರ ಸುತ್ತಮುತ್ತ ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಮೊದಲಾದ
ಹಳ್ಳಿಗಳಿದ್ದವು. ಈ ಎಲ್ಲ ಪ್ರದೇಶಗಳಲ್ಲೂ ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯಂದು
ಬಸವ ಬಂದು ರೈತರು ಕಷ್ಟಪಟ್ಟು ಬೆಳೆಸಿದ ಕಡಲೆಕಾಯಿಯನ್ನು ತಿಂದುಕೊಂಡು ಹೋಗುತ್ತಿತ್ತು. ಹಿಂಬಾಲಿಸಿ
ಬಂದ ರೈತರು ಈ ಬಸವ ಗುಡ್ಡದಲ್ಲಿ ಮಾಯವಾದದ್ದನ್ನು ಕಂಡರು. ಅವರು ಈ ಬಸವ ಆ ಗುಡ್ಡದಲ್ಲಿ ಕಲ್ಲಾಗಿ
ನಿಂತಿದ್ದನ್ನು ಕಂಡು ಆಶ್ಚರ್ಯ ಪಟ್ಟರು. ಅಷ್ಟೇ ಅಲ್ಲ ಆ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆದ. ಇದೇ
ಕಲ್ಲಿನ ಬಸವ ಈಗ ಇಲ್ಲಿರುವ ದೊಡ್ಡ ಬಸವಣ್ಣ. ಈಶ್ವರನ ವಾಹನವಾದ ನಂದಿಯೇ ಆ ಬಸವನೆಂದು ತಿಳಿದು ಭಕ್ತಿಯಿಂದ
ಅಡ್ಡ ಬಿದ್ದರು. ಪಶ್ಚಾತ್ತಾಪ ಪಟ್ಟರು. ಅದಕ್ಕಾಗಿ ಸುಂಕ ಕಟ್ಟಲು ಪ್ರಾರಂಭಿಸಿದರು. ತಾವು ಬೆಳೆಯುವ
ಕಡಲೇಕಾಯಿ ಬೆಳೆಗೆ ಅವನೇ ಕಾವಲುಗಾರನೆಂದು ಆತನಿಗೆ ಎಲ್ಲ ಜವಾಬ್ದಾರಿ ವಹಿಸಿದರು. ಅಲ್ಲಿ ಅವನಿಗೆ
ಒಂದು ಚಿಕ್ಕ ದೇವಸ್ಥಾನ ಕಟ್ಟಿಸಿದರು. ಪ್ರತಿ ವರ್ಷ ಕಾರ್ತಿಕಮಾಸದ ಕಡೇ ಸೋಮವಾರ ತಾವು ಬೆಳೆದ ಕಡಲೇಕಾಯಿಯನ್ನು
ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವಣ್ಣನನ್ನು ಮನಸೋಇಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ.
ವಿವಿಧೆಡೆಯಿಂದ ಕಡಲೆಕಾಯಿ
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಸ್ವಲ್ಪ ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ.