ಮಹಾ ಪ್ರದೋಷ ವಿಶೇಷ ಪೂಜೆ
ಶ್ರೀಶಾರದಾ
ಪೀಠದಲ್ಲಿ ಕಾರ್ತಿಕ ಮಾಸದ ಕೃಷ್ಣ ಪಕ್ಷದಲ್ಲಿ ಶ್ರೀ ಶಕ್ತಿಗಣಪತಿಗೆ ಮಹಾ ಪ್ರದೋಷ ವಿಶೇಷ ಪೂಜೆ ನೆರವೇರುವುದು.
ಶಾರದಾ
ಪೀಠದ ಒಳ ಪ್ರಾಂಗಣದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾದಲ್ಲಿ ಶ್ರೀಸದ್ವಿದ್ಯಾ ಸಂಜೀವಿನಿ ಸಂಸ್ಕೃತ
ಪಾಠಶಾಲೆ ವಿದ್ಯಾರ್ಥಿಗಳು ಬೆಳಗ್ಗೆಯೇ ತಳಿರು, ತೋರಣ, ಪುಷ್ಪಾಲಂಕಾರ, ವಿದ್ಯುದೀಪಾಲಂಕಾರಗೊಳಿಸಿ
ಶಕ್ತಿ ಗಣಪತಿಗೆ ವಿಶೇಷ ಪೂಜಾದಿಗಳು ನೆರವೇರಿಸುವರು. ಮಹಾ ಪ್ರದೋಷದ ಅಂಗವಾಗಿ ಶ್ರೀ ಶಕ್ತಿ ಗಣಪತಿಗೆ
ಸಹಸ್ರ ಮೋದಕ ಗಣಹೋಮ, ಅಥರ್ವ ಶೀರ್ಷ ಪಾರಾಯಣ, ಶತರುದ್ರಾಭಿಷೇಕ, ಅಷ್ಟಾವಧಾನ ಸೇವೆ, ವೇದಘೋಷಗಳು,
ವಾದ್ಯ ಸೇವೆ ನಡೆಯುವುದು.
ಮಧ್ಯಾಹ್ನ
ಶಕ್ತಿ ಗಣಪತಿ ದೇವಸ್ಥಾನದಲ್ಲಿ ಜಗದ್ಗುರುಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವರು. ಬಳಿಕ ಯಾಗಶಾಲೆಗೆ
ತೆರಳಿ ಸಹಸ್ರ ಮೋದಕ ಗಣಹೋಮದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಬೀದಿ ಉತ್ಸವ
ಮಹಾ ಪ್ರದೋಷ
ಅಂಗವಾಗಿ ಸಂಜೆ ಪಟ್ಟಣದ ರಾಜಬೀದಿಯಲ್ಲಿ ಶಕ್ತಿ ಗಣಪತಿಯ ಉತ್ಸವ ಮೂರ್ತಿಯನ್ನು ಅಲಂಕೃತ ಚಿಕ್ಕ ರಥದಲ್ಲಿ
ಕುಳ್ಳಿರಿಸಿ ಬೀದಿ ಉತ್ಸವ ನಡೆಯುವುದು. ಉತ್ಸವ ಸಾಗುವ ದಾರಿಯಲ್ಲಿ ವೇದಘೋಷಗಳೊಂದಿಗೆ ಮೆರವಣಿಗೆ ನಡೆಯುವುದು.
ಬೀದಿಯಲ್ಲಿ ಭಕ್ತರು ಗಣಪತಿಗೆ ಆರತಿ, ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸುವರು. ಭಾರತೀಚೌಕದಲ್ಲಿ ಇರುವ
ಕಟ್ಟೆ ಬಾಗಿಲು ಗಣಪತಿಗೆ ಪೂಜೆ ಹಾಗೂ ಮಂಗಳಾರತಿ ಇರುತ್ತದೆ.
ನಂತರ ರಾತ್ರಿ ಶಕ್ತಿ ಗಣಪತಿ ಸನ್ನಿಧಿಯಲ್ಲಿ ದೀಪೋತ್ಸವ, ಅಷ್ಟಾವಧಾನ ಸೇವೆ ಪೂಜಾದಿಗಳು ಮತ್ತು ಮಂಗಳಾರತಿ ನಡೆಯುವುದು. ಶ್ರೀಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳು ಮಹಾಪ್ರದೋಷ ಪೂಜೆಯನ್ನು ಪ್ರತಿ ವರ್ಷವೂ ಆಚರಿಸುತ್ತಾರೆ.