ಕಾರ್ತೀಕ ಸೋಮವಾರ

ಪರಿಚಯ

ಕಾರ್ತೀಕ ಸೋಮವಾರವು ಕಾರ್ತೀಕ ಮಾಸದಲ್ಲಿನ (ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯಭಾಗದವರೆಗೆ) ಸೋಮವಾರಗಳನ್ನು ಸೂಚಿಸುತ್ತದೆ. ಈ ದಿನವು ಭಗವಾನ್ ಶಿವನನ್ನು ಉಪಾಸಿಸಲು, ಪಾಪಗಳನ್ನು ನಿವಾರಿಸಿಕೊಳ್ಳಲು ಪರಮ ಆನಂದವನ್ನು ಮತ್ತು ಆತನ ಅನುಗ್ರಹವನ್ನು ಪಡೆಯಲು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಮಹತ್ವ

ಕಾರ್ತೀಕ ಮಾಸದಲ್ಲಿ ಶಿವನ ಶಕ್ತಿ ಅತ್ಯಂತ ಪ್ರಬಲವಾಗಿರುತ್ತದೆ ಎಂಬ ನಂಬಿಕೆ ಇದೆ. ಪವಿತ್ರ ಗ್ರಂಥಗಳ ಪ್ರಕಾರ, ಈ ಮಾಸದಲ್ಲಿ ಶಿವನು ಅನಂತ ಅಗ್ನಿರೂಪದಲ್ಲಿ ಕಾಣಿಸಿಕೊಂಡನು. ಅಲ್ಲದೆ, ಚಂದ್ರನು ಶಿವನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದು, ಆತನ ಜಡೆಯನ್ನು ಅವನು ಅಲಂಕರಿಸುತ್ತಾನೆ. ಚಂದ್ರ ಸೋಮವಾರಗಳ ಅಧಿಪತಿ ಗ್ರಹವಾಗಿದ್ದು, ಸೋಮವಾರಗಳು ಕೂಡ ಶಿವನಿಗೆ ಶುಭಕರವಾಗಿರುವುದರಿಂದ ಕಾರ್ತೀಕ ಸೋಮವಾರಗಳು ಸರ್ವೋತ್ತಮ ಪರಮಾತ್ಮನ ಆರಾಧನೆಗೆ ಹೆಚ್ಚು ಪೂಜನೀಯ.

ಕಾರ್ತೀಕ ಸೋಮವಾರದ ಹಿಂದಿನ ಐತಿಹ್ಯ

ದಂತಕಥೆಯ ಪ್ರಕಾರ ಚಂದ್ರನು ದಕ್ಷ ರಾಜನಿಂದ ಶಾಪಗ್ರಸ್ತನಾಗಿದ್ದನು. ಏಕೆಂದರೆ ತನ್ನ 27 ಪತ್ನಿಯರನ್ನು (ದಕ್ಷನ ಪುತ್ರಿಯರು) ಅವನು ಸಮಾನವಾಗಿ ನೋಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಅವನ ಶಕ್ತಿಗಳು ಕ್ಷೀಣಿಸತೊಡಗಿದವು. ಈ ರೀತಿ ಬಲಹೀನಗೊಂಡ ನಂತರ ಚಂದ್ರನು ತನ್ನನ್ನು ಕಾಪಾಡಲು ಶಿವನನ್ನು ಪ್ರಾರ್ಥಿಸಿದನು. ಆತನ ಪ್ರಾರ್ಥನೆಯಿಂದ ಪ್ರಸನ್ನನಾದ ಶಿವನು ಶಾಪದಿಂದ ಅವನನ್ನು ಮುಕ್ತಿಗೊಳಿಸಿ, ಅರ್ಧಚಂದ್ರನಾಗಿ ಅವನನ್ನು ತಲೆಯ ಮೇಲೆ ಇರಿಸಿಕೊಂಡನು. ಕಾರ್ತೀಕ ಮಾಸದ ಸೋಮವಾರದಂದು ಶಿವನು ಈ ವರವನ್ನು ನೀಡಿದನು ಎಂದು ನಂಬಲಾಗಿದೆ. ಆದ್ದರಿಂದ ಕಾರ್ತೀಕ ಮಾಸದ ಸೋಮವಾರಗಳು ಶಿವನಿಂದ ಪೂಜೆ ಮತ್ತು ಆಶೀರ್ವಾದ ಪಡೆಯಲು ಆದರ್ಶವಾಗಿವೆ.

ಆಚರಣೆಗಳು

ಹೆಚ್ಚಿನ ಶಿವ ಭಕ್ತರು ಕಾರ್ತೀಕ ಸೋಮವಾರ ವ್ರತವನ್ನು (ಉಪವಾಸ) ಆಚರಿಸುತ್ತಾರೆ ಮತ್ತು ಎಲ್ಲಾ ಸೋಮವಾರಗಳಲ್ಲಿ ಶಿವನಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಉಪವಾಸವನ್ನು ಮುಂಜಾನೆ ಪ್ರಾರಂಭಿಸುವುದು ಮತ್ತು ಚಂದ್ರನದರ್ಶನದೊಂದಿಗೆ ಅಂತ್ಯಗೊಳಿಸಲಾಗುತ್ತದೆ. ದಿನವಿಡೀ ಭಕ್ತರು ಶಿವಪಂಚಾಕ್ಷರಿ ಮಂತ್ರಗಳನ್ನು ಜಪಿಸುವ ಮೂಲಕ, ಶಿವನನ್ನು ಸ್ತುತಿಸಿ, ಶಿವನಿಗೆ ಅನ್ನ ಹೂಗಳನ್ನು ಮತ್ತು ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಸೋಮವಾರಗಳಂದು ನಡೆಯುವ ಈ ಕಠಿಣವಾದ ಆರಾಧನೆಯು ಶಿವನನ್ನು ಒಲಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ನಂಬಲಾಗಿದೆ.

ಕಾರ್ತೀಕ ಸೋಮವಾರ ಶಿವನಿಗೆ ಬಿಲ್ವಪತ್ರೆಯೊಂದಿಗೆ ಅರ್ಚನೆಯನ್ನು ಮಾಡುವುದರಿಂದ ಮಾನಸಿಕ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಬಹುದೆಂದು ನಂಬಲಾಗಿದೆ. ಈ ಮಾಸದಲ್ಲಿ ಭಗವಾನ್ ಶಿವನು ಉಗ್ರಸ್ವರೂಪದಲ್ಲಿ ಕಾಣಿಸಿಕೊಂಡಿರುವುದರಿಂದ ಎಲ್ಲಾ ಶಿವ ದೇವಾಲಯಗಳಲ್ಲಿ ಜಲಾಭಿಷೇಕದೊಂದಿಗೆ ಪೂಜೆಯನ್ನು ಮಾಡಲಾಗುತ್ತದೆ.