ಗೀತಾ ಜಯಂತಿ

ಮಹತ್ವ

ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯ ಜನ್ಮದಿನವೇ ಗೀತಾ ಜಯಂತಿ. ಹಿಂದೂ ಪಂಚಾಂಗದ ಮಾರ್ಗಶಿರ ಮಾಸದ ಶುಕ್ಲ ಏಕಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ (ಇಂದಿನ ಹರಿಯಾಣದಲ್ಲಿ) ಅರ್ಜುನನಿಗೆ ಭಗವದ್ಗೀತೆಯನ್ನು ಕೃಷ್ಣ ಸ್ವತಃ ತಾನೇ ಬಹಿರಂಗಪಡಿಸಿದನೆಂದು ನಂಬಲಾಗಿದೆ.

ಸಂಜಯನು ರಾಜ ಧೃತರಾಷ್ಟ್ರನಿಗೆ ಶ್ರೀಕೃಷ್ಣ ಮತ್ತು ಅರ್ಜುನನ ನಡುವೆ ನಡೆದ ಸಂವಾದವನ್ನು ವರ್ಣಿಸಿದನು. ಸಂಜಯ ಗುರುವೇದವ್ಯಾಸರಿಂದ ಅನುಗ್ರಹೀತನಾಗಿ ಯುದ್ಧಭೂಮಿಯಲ್ಲಿ ನಡೆದ ಘಟನೆಗಳನ್ನು ದಿವ್ಯ ದೃಷ್ಠಿಯಿಂದ ಗ್ರಹಿಸುವ ಶಕ್ತಿ ಇತ್ತು.

ಆಚರಣೆ

ಶ್ರೀ ಕೃಷ್ಣನು ದೇವರೊಂದಿಗೆ (ಪರಮಾತ್ಮ) ನಮ್ಮ ಸಂಬಂಧವನ್ನು ಹೇಗೆ ವೃದ್ಧಿಗೊಳಿಸಿಕೊಳ್ಳಬೇಕೆಂದು ಬೋಧಿಸುತ್ತಾನೆ. ಭಗವದ್ಗೀತೆಯನ್ನು ತಮ್ಮ ದೈವಿಕ ಮಾತೆ ಎಂದು ಭಾವಿಸುವ ಭಗವಾನ್ ಕೃಷ್ಣನ (ಸನಾತನ ಧರ್ಮದ ಅನುಯಾಯಿಗಳು) ಎಲ್ಲಾ ಭಕ್ತರು ವಿಶ್ವದಾದ್ಯಂತ ಗೀತಾ ಜಯಂತಿಯನ್ನು ಆಚರಿಸುತ್ತಾರೆ.

ದಿನವಿಡೀ ಭಗವದ್ಗೀತೆಯ 700 ಶ್ಲೋಕಗಳನ್ನು ಸಾಮೂಹಿಕವಾಗಿ ಪಠಿಸುವುದರ ಮೂಲಕ ಆಚರಿಸಲಾಗುತ್ತದೆ. ಆಧ್ಯಾತ್ಮಿಕ ಪ್ರಗತಿಯನ್ನು ಬಯಸುವವರು ಏಕಾದಶಿಯಂದು ಉಪವಾಸ ವ್ರತಾಚರಣೆ ಮಾಡುವುದರಿಂದ ಧಾನ್ಯಗಳು ಮತ್ತು ಬೇಳೆಗಳನ್ನು ವರ್ಜಿಸುತ್ತಾರೆ. ಈ ದಿನದಂದು ಭಜನೆ, ಪೂಜೆಗಳು ನಡೆಯುತ್ತವೆ. ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸ್ಥಳಗಳಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು, ಗೀತಾ ಪಠಣ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಯೋಗಿಗಳು, ಸಂನ್ಯಾಸಿಗಳು ಮತ್ತು ವಿದ್ವಾಂಸರು ಉಪನ್ಯಾಸಗಳನ್ನು ನೀಡುತ್ತಾರೆ. ಗೀತಾಸಾರದ ಕರಪತ್ರ, ಪುಸ್ತಕಗಳನ್ನು ಸಾರ್ವಜನಿಕರಿಗೆ ಹಂಚುತ್ತಾರೆ. ಈ ಪವಿತ್ರ ದಿನದಂದು ಭಗವದ್ಗೀತೆಯ ಪ್ರತಿಗಳನ್ನು ಉಚಿತವಾಗಿ ವಿತರಿಸುವುದು ಶುಭಕರವೆಂದು ಭಾವಿಸುತ್ತಾರೆ.