ಸುಬ್ರಮಣ್ಯ ಲಕ್ಷದೀಪೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.

ಸುಬ್ರಹ್ಮಣ್ಯ ದೇವಸ್ಥಾನ

ಮಹತೋಭಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಆದಿ ಶಂಕರರ ಕಾಲದಿಂದ ಸ್ಥಾನಿಕ ಸ್ಮಾರ್ತ ಮನೆತನದ ಆಡಳಿತಕ್ಕೆ ಒಳಪಟ್ಟಿದ್ದ ದೇವಾಲಯವಾಗಿತ್ತು. ಸದ್ಯ ಈಗ ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ. ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.

ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ.

ನಾಗದೋಷಗಳ ಪರಿಹಾರ ಸ್ಥಳ

ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ.

ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ದಮನಕ್ಕಾಗಿ ಜನ್ಮವೆತ್ತಿದ ಕುಮಾರಸ್ವಾಮಿಯು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣಪತಿಯ ಜೊತೆ ಕುಮಾರಪರ್ವತಕ್ಕೆ ಬಂದಾಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಸ್ವಾಮಿಗೆ ಕುಮಾರಧಾರ ತೀರ್ಥದ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ಪಾಣಿಗ್ರಹಣ ಮಾಡಿದನು. ಅದೇ ವೇಳೆ ಅಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆಯನ್ನು ಮನ್ನಿಸಿ ತಾನು ದೇವಸೇನಾ ಸಮೇತನಾಗಿ ಒಂದಂಶದಿಂದ ಅವನಲ್ಲಿ ನಿತ್ಯ ಸನ್ನಿಹಿತನಾಗಿ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ವಾಸುಕಿಯನ್ನು ಹರಸುತ್ತಾನೆ.

ಮೃತ್ತಿಕಾ ಪ್ರಸಾದ ಮತ್ತು ಮಡೆಸ್ನಾನ (ಉರುಳು ಸೇವೆ)

ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭೀಷ್ಟ ಪ್ರದಾಯಕನಾಗಿ ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಗುಪ್ತ ಕ್ಷೇತ್ರವೆಂಬುವುದಾಗಿಯೂ ಈ ಕ್ಷೇತ್ರವನ್ನು ಕರೆಯುತ್ತಾರೆ. ಮೃತ್ತಿಕಾ ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಮಡೆಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಚರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನಸಂತರ್ಪಣೆ ನಡೆಯುತ್ತಿದೆ. ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂದ್ಯ, ಭೂಮಿ ದೋಷವೇ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ. ಜನ್ಮ ಜನ್ಮಾಂತರದ ದುರಿತಗಳ ನಾಶನಾದ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಶ್ರದ್ಧಾ-ಭಕ್ತಿ ಪೂರ್ವಕ ಸೇವಾ ಕೈಂಕರ್ಯಗಳನ್ನು ಸ್ವೀಕರಿಸಿ ಇಷ್ಟಾರ್ಥಗಳನ್ನು ಕರುಣಿಸಿ ಪೊರೆಯುವ ಕಲಿಯುಗ ಪ್ರತ್ಯಕ್ಷ ದೇವರೆನಿಸಿಕೊಂಡಿದ್ದಾನೆ.

ದೇವಸ್ಥಾನದ ಶಂಕುಸ್ಥಾಪನೆ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರಸಿದ್ಧಿಯಾಗಿತ್ತೆಂದು ಶಾಸನಗಳಿಂದಲೂ, ಗ್ರಂಥಗಳಿಂದಲೂ ತಿಳಿದು ಬರುತ್ತದೆ. ಶ್ರೀ ಆದಿ ಶಂಕರಾಚಾರ್ಯರು ದಿಗ್ವಿಜಯಕ್ಕಾಗಿ ಇಲ್ಲಗೆ ಬಂದು ಕೆಲವು ದಿನ ವಾಸ ಮಾಡಿದ್ದರೆಂದೂ ಆನಂದ ವಿರಚಿತ “ಶಂಕರ ವಿಜಯ”ದಲ್ಲಿ ಹೇಳಿದೆ. ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರದಲ್ಲಿಯೂ ಉಲ್ಲೇಖವಿದೆ. ಶ್ರೀ ಷಣ್ಮುಖ ಸ್ವಾಮಿಯು ತಾರಕಾದಿ ಮಹಾ ಅಸುರರನ್ನು ನಿಗ್ರಹಿಸಿ ತಮ್ಮ ಶಕ್ತ್ಯಾಯುಧ ಧಾರೆಯನ್ನು ಈ ತೀರ್ಥದಲ್ಲಿ ತೊಳೆದುದರಿಂದ ಇದಕ್ಕೆ ಕುಮಾರಧಾರಾ ತೀರ್ಥವೆಂದು ಹೆಸರು ಬಂತೆಂದು ಇತಿಹಾಸವಿದೆ. ಉರುಳು ಸೇವೆ ಮಾಡುವುದನ್ನು ಸಂತರ್ಪಣೆಯ ಉಚ್ಚಿಷ್ಠದಲ್ಲಿ ಹೊರಳಾಡಿಕೊಂಡು ಅಂಗಣದಲ್ಲಿ ಪ್ರದಕ್ಷಿಣೆ ಬರುವ “ಮಡೆಸ್ನಾನ” ಸೇವೆಯು ಮುಖ್ಯ ಹರಕಯಲ್ಲಿ ಒಂದಾಗಿದೆ. ಇತಿಹಾಸ ಪ್ರಸಿದ್ಧ “ಮೂಲಮೃತ್ತಿಗೆ” (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿರುತ್ತದೆ.

ಕಾರ್ತಿಕ ಬಹುಳದಲ್ಲಿ ಇಲ್ಲಿ ಸುಬ್ರಮಣ್ಯ ದೇವರಿಗೆ ಲಕ್ಷದೀಪೋತ್ಸವ ನಡೆಯುವುದು ವಿಶೇಷ.