ಆಚರಣೆ ಮತ್ತು ಮಹತ್ವ
೧೯೯೯ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು ವಿಶ್ವ ಹೃದಯ ಸಂಸ್ಥೆ (ವರ್ಲ್ಡ್ ಹಾರ್ಟ್ ಫೆಡರೇಷನ್) ಯು ಆಯೋಜಿಸುತ್ತಿದೆ. ಆದರೆ ೨೦೧೧ ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ ೨೯ ಸೆಪ್ಟೆಂಬರ್ ನಂದು ಆಚರಿಸಲಾಗುತ್ತದೆ.
ವಿಶ್ವ ಹಾರ್ಟ್ ಫೆಡರೇಶನ್ ಸಂಸ್ಥೆಯು ಮುಖ್ಯ ಅಪಾಯಕಾರಿ ಅಂಶಗಳಾದ, ತಂಬಾಕು, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವಿಕೆಗಳನ್ನು ನಿಯಂತ್ರಿಸುವುದರಿಂದ ಹೃದಯ ರೋಗ ಮತ್ತು ಹೃದಯಾಘಾತಗಳಿಂದ ಅಕಾಲಿಕ ಮರಣಗಳನ್ನು ಕನಿಷ್ಠ ಪ್ರತಿಶತ ೮೦ರಷ್ಟರ ಮಟ್ಟಿಗೆ ತಪ್ಪಿಸಬಹುದಾಗಿದೆ ಎಂದು ಪ್ರಚಾರ ಮಾಡುತ್ತದೆ. ಈ ದಿನದಂದು ಅದು ಸಾರ್ವಜನಿಕ ಭಾಷಣ, ಮತ್ತು ಪ್ರದರ್ಶನ, ನಡಿಗೆ ಮತ್ತು ಓಟ, ಸಂಗೀತ ಅಥವಾ ಕ್ರೀಡಾಕೂಟಗಳಂಥ ಚಟುವಟಿಕೆಗಳನ್ನು ವಿಶ್ವದಾದ್ಯಂತ ಏರ್ಪಡಿಸುತ್ತದೆ.
ವಿಶ್ವ ಹೃದಯ ಸಂಸ್ಥೆಯು (ವರ್ಲ್ಡ್ ಹಾರ್ಟ್ ಫೆಡರೇಷನ್ ) ಹೃದಯ ಕಾಯಿಲೆಗಳ ತಡೆಗಟ್ಟುವಿಕೆಗಾಗಿ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದ್ದು ಮತ್ತು ಏಷ್ಯಾ ಫೆಸಿಫಿಕ್, ಯುರೋಪ್, ಪೂರ್ವ ಮೆಡಿಟರೇನಿಯನ್, ಅಮೆರಿಕಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿರುವ ಸುಮಾರು 100 ದೇಶಗಳ ಹೃದಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದು ಸ್ವಿಜರ್ಲ್ಯಾಂಡ್ನ ಜಿನೀವಾ ಮೂಲದ ಸರಕಾರೇತರ ಸಂಘಟನೆಯಾಗಿದೆ.