ಶ್ರೀ ಅಭಿನವ ವಿದ್ಯಾತೀರ್ಥರು
ಪ್ರಾತಃಸ್ಮರಣೀಯರಾದ
ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ 35ನೇ
ಪೀಠಾಧೀಶರಾಗಿದ್ದವರು. ವಿಶ್ವವಿಖ್ಯಾತರಾಗಿದ್ದ ಈ ಪರಮಪೂಜ್ಯರ ಜೀವನವು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ.
ಅವರು ಜನಿಸಿದ್ದು ಪಿಂಗಳ ಸಂವತ್ಸರದ ಆಶ್ವಯುಜ ಬಹುಳ ಚತುರ್ದಶಿಯಂದು (12 ನವೆಂಬರ್ 1917). ಬಾಲ್ಯದಿಂದಲೇ
ದೈವಭಕ್ತಿ, ಇಂದ್ರಿಯವಿಷಯಗಳಲ್ಲಿ ವೈರಾಗ್ಯ, ಸಜ್ಜನರಲ್ಲಿ ಪ್ರೀತಿ ಹಾಗೂ ಸಚ್ಚಾರಿತ್ರ್ಯ - ಇವುಗಳಿಂದ
ಕೂಡಿದ್ದರು. ಆಗ ಶೃಂಗೇರಿ ಶಾರದಾಪೀಠದಲ್ಲಿ ವಿರಾಜಮಾನರಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಚಂದ್ರಶೇಖರಭಾರತೀ
ಮಹಾಸ್ವಾಮಿಗಳ ಕರುಣೆಗೆ ಪಾತ್ರರಾದ ಅವರ ಉಪನಯನ ಶೃಂಗೇರಿಯಲ್ಲೇ ನೆರವೇರಿತು. ಶೃಂಗೇರಿಯ ಪಾಠಶಾಲೆಗೆ
ಸೇರಿಸಿದರು. ಅಲ್ಲಿ ವಿದ್ವಾಂಸರಿಂದ ವೇದ-ಸಂಸ್ಕೃತ ಸಾಹಿತ್ಯದ ಅಧ್ಯಯನ ಮಾಡಿದರು.
ಸಂನ್ಯಾಸ ಸ್ವೀಕಾರ
ಗುರುವರ್ಯರು
ಬಾಲಬ್ರಹ್ಮಚಾರಿಯನ್ನು ಒಂದು ವರ್ಷ ಕಾಲ ಪರೀಕ್ಷಿಸಿ ಒಂದು ಶುಭದಿನ (1931ರ ಮೇ 22ರಂದು) ಸಂನ್ಯಾಸಾಶ್ರಮವನ್ನಿತ್ತು,
'ಅಭಿನವ ವಿದ್ಯಾತೀರ್ಥ' ಎಂಬ ಆಶ್ರಮನಾಮವನ್ನು ಅನುಗ್ರಹಿಸಿ, ಪೀಠಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ
ನಿಯಮಿಸಿದರು. ದಕ್ಷಿಣಾಮ್ನಾಯ ಶಾರದಾಪೀಠದ ಹತ್ತನೆಯ ಜಗದ್ಗುರುಗಳಾದ 'ವಿದ್ಯಾತೀರ್ಥ'ರಂತೆ 'ಯೋಗಿ'
ಮತ್ತು 'ತಪಸ್ವಿ' ಆಗಲೆಂದು ಈ ಅಭಿಧಾನವನ್ನು ನೀಡಿದ್ದರು.
ಯೋಗ, ನ್ಯಾಯಶಾಸ್ತ್ರದ,
ವೇದಾಂತಶಾಸ್ತ್ರ, ಸಂಸ್ಕೃತ ಸಾಹಿತ್ಯದಲ್ಲಿ ನುರಿತವರಾಗಿದ್ದರು. ಮಹಾಸ್ವಾಮಿಗಳು ಧರ್ಮಶಾಸ್ತ್ರ ಗ್ರಂಥಗಳನ್ನು
ಆಳವಾಗಿ ಪರಿಶೀಲಿಸಿ, ಧರ್ಮಕ್ಕೆ ಸಂಬಂಧಪಟ್ಟ ಶಿಷ್ಯರ ಸಂದೇಹಗಳನ್ನು, ಪ್ರಮಾಣವಚನ ಮತ್ತು ಉದಾಹರಣೆಗಳ
ಸಹಿತವಾಗಿ ಪರಿಹರಿಸುತ್ತಿದ್ದರು. ಸಂಸ್ಕೃತ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ನಿರರ್ಗಳವಾಗಿ
ಮಾತನಾಡಲು ಸಮರ್ಥರಾದ ಅವರು ಹಿಂದಿಭಾಷೆಯಲ್ಲೂ ಪ್ರಾವೀಣ್ಯವನ್ನು ಸಂಪಾದಿಸಿದ್ದರು. ಅವರಿಗೆ ಸತತ
23 ವರ್ಷ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಪ್ರತ್ಯಕ್ಷ ಪರಮಾನುಗ್ರಹ ಲಭಿಸಿತ್ತು.
ಜಯಸಂವತ್ಸರದ
ಆಶ್ವಯುಜ ಕೃಷ್ಣ ಪಂಚಮಿಯಂದು (16.10.1954) ಶ್ರೀ ಅಭಿನವ ವಿದ್ಯಾತೀರ್ಥರು ಶೃಂಗೇರಿ ಶಾರದಾಪೀಠದಲ್ಲಿ
ಪಟ್ಟಾಭಿಷಿಕ್ತರಾದರು. 1956ರಲ್ಲಿ ಶೃಂಗೇರಿಯಿಂದ ಯಾತ್ರೆಯನ್ನು ಪ್ರಾರಂಭಿಸಿ ಕನ್ಯಾಕುಮಾರಿಯಿಂದ
ಹಿಮಾಲಯದವರೆಗೆ ವ್ಯಾಪಕವಾಗಿ ಯಾತ್ರೆಗಳನ್ನು ಕೈಗೊಂಡರು. ಅವರು ಶೃಂಗೇರಿಯಲ್ಲಿ ಅನೇಕ ಯೋಜನೆಗಳನ್ನು
ಪ್ರಾರಂಭಿಸಿದರು.
ಮಹಾಸ್ವಾಮಿಗಳು
ಶುಕ್ಲ ಸಂವತ್ಸರದ ಭಾದ್ರಪದ ಕೃಷ್ಣ ಸಪ್ತಮಿಯಂದು (21 ಸೆಪ್ಟೆಂಬರ್ 1989) ವಿದೇಹಕೈವಲ್ಯವನ್ನು ಹೊಂದಿದರು.
ಶ್ರೀ ಸುರಸರಸ್ವತೀ ಸಭಾ
ವೇದ ಮತ್ತು ಶಾಸ್ತ್ರಗಳ
ಪ್ರಚಾರ-ಪ್ರಸಾರಕ್ಕಾಗಿ ಜನಸಾಮಾನ್ಯರು ಸಂಸ್ಕೃತವನ್ನು ಕಲಿಯಬೇಕು ಮತ್ತು ಕಲಿಯುವಂತಾಗಲಿ ಎಂಬ ಮಹೋದ್ದೇಶದಿಂದ
1969ರ ಸೆಪ್ಟೆಂಬರ್ ಎಂಟರಂದು ಶ್ರೀ ಸುರಸರಸ್ವತೀ ಸಭಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.