ಶೃಂಗೇರಿ ಚಂದ್ರಶೇಖರ ಭಾರತೀ ಜಯಂತಿ

ಜನನ-ಬಾಲ್ಯ

ಲಕ್ಷ್ಮಮ್ಮ-ಗೋಪಾಲಶಾಸ್ತ್ರಿ ದಂಪತಿಗೆ ಹದಿಮೂರು ಮಕ್ಕಳು ಆದರೂ ಒಂದೂ ಜೀವಂತವಾಗಿ ಉಳಿಯಲಿಲ್ಲ. ಅವರು ಗೋಕರ್ಣಕ್ಷೇತ್ರಕ್ಕೆ ಹೋಗಿ, 'ನಿನ್ನ ಕೃಪೆಯಿಂದ ಮಕ್ಕಳಾಗಿ ಜೀವಂತವಾಗಿ ಉಳಿದರೆ ಆ ಮಗುವನ್ನು ಶ್ರೀ ಶಾರದಾಂಬೆಗೆ ಅರ್ಪಿಸುವೆ' ಎಂದು ಶ್ರೀ ಮಹಾಬಲೇಶ್ವರನ ಮುಂದೆ ನಿಂತು ಪ್ರಾರ್ಥಿಸಿದರು. ಆ ಪ್ರಾರ್ಥನೆಯ ಫಲದಿಂದ ನಂದನ ಸಂವತ್ಸರದ ಆಶ್ವಯುಜಮಾಸದ ಬಹುಳ ಏಕಾದಶಿಯಂದು (16-10-1892) ಗಂಡುಮಗು ಜನಿಸಿತು. ಆ ಮಗುವಿಗೆ ನರಸಿಂಹ ಎಂದು ನಾಮಕರಣ ಮಾಡಲಾಯಿತು.

ಪರಮ ವಿರಾಗಿ

ತಂದೆ-ತಾಯಿಗೆ ಅಚ್ಚುಮೆಚ್ಚಿನ ಮಗನಾದ ನರಸಿಂಹನ ಮನಸ್ಸು ಸಣ್ಣ ವಯಸ್ಸಿನಲ್ಲೇ ಭಗವಂತನ ಕಡೆ ಹೋಗಲು ಪ್ರಾರಂಭಿಸಿತು. ಶೃಂಗೇರಿಯಲ್ಲಿದ್ದುದರಿಂದ ಪ್ರತಿನಿತ್ಯ ಮಠಕ್ಕೆ ಹೋಗಿ ಜಗದ್ಗುರು ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ದರ್ಶನ ಪಡೆಯುತ್ತಿದ್ದ. ನರಸಿಂಹನನ್ನು ನೋಡಿದ ಜಗದ್ಗುರುಗಳು ಈ ಪೀಠಕ್ಕೆ ಈ ಬಾಲಕನೇ ಯೋಗ್ಯನಿರುವನೆಂದು ನಿರ್ಧಾರ ಮಾಡಿದರು. ಗುರುಗಳ ಅಪ್ಪಣೆಯಂತೆ ನರಸಿಂಹ ಶ್ರೀಮಠದ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸಂಸ್ಕೃತ ಸಾಹಿತ್ಯ ಅಧ್ಯಯನ ಮಾಡಿದ.

ನಂತರ ಜಗದ್ಗುರುಗಳ ಅಪ್ಪಣೆಯ ಮೇರೆಗೆ ಹೆಚ್ಚಿನ ಶಾಸ್ತ್ರಾಧ್ಯಯನಕ್ಕಾಗಿ ಬೆಂಗಳೂರಿಗೆ ಬಂದ. ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಅಲ್ಲಿ ವೆಳ್ಳೂರು ಸುಬ್ರಹ್ಮಣ್ಯ ಶಾಸ್ತ್ರಿಗಳು, ವೈದ್ಯನಾಥ ಶಾಸ್ತ್ರಿಗಳು, ಹಾನಗಲ್ ವಿರೂಪಾಕ್ಷ ಶಾಸ್ತ್ರಿಗಳು ಮೊದಲಾದ ಪಂಡಿತರಿಂದ ತರ್ಕಶಾಸ್ತ್ರ, ಪೂರ್ವಮೀಮಾಂಸಾ ಹಾಗೂ ವೇದಾಂತ ಶಾಸ್ತ್ರಗಳನ್ನು ಕಲಿತರು. ಇತ್ತ ಶೃಂಗೇರಿಮಠದಲ್ಲಿ ಜಗದ್ಗುರುಗಳಿಗೆ ದೇಹಾರೋಗ್ಯ ಕ್ಷೀಣಿಸುತ್ತಿತ್ತು. ಗುರುಗಳು ಮಠದ ಆಡಳಿತಾಧಿಕಾರಿ ಶ್ರೀಕಂಠಶಾಸ್ತ್ರಿಗಳನ್ನು ಕರೆದು ನರಸಿಂಹಶಾಸ್ತ್ರಿಗಳಿಗೆ ಸಂನ್ಯಾಸಾಶ್ರಮ ಕೊಡಿಸಿ ಅವರನ್ನೇ ಉತ್ತರಾಧಿಕಾರಿಯಾಗಿ ಮಾಡಲು ನಿರ್ಧಾರ ಮಾಡಿರುವೆ, ನರಸಿಂಹನನ್ನು ಕರೆಸಿ ಎಂದರು. ಈ ವಿಷಯ ನರಸಿಂಹ ಮತ್ತು ಅವರ ತಂದೆ-ತಾಯಿಗೆ ತಿಳಿಯಿತು. ಅವರು ಮಗ ಸಂನ್ಯಾಸಿಯಾಗಲು ಒಪ್ಪಿದರು.

ನಿತ್ಯಕರ್ಮ, ಪೂಜೆ ಇತ್ಯಾದಿಗಳನ್ನು ಮಾಡಲು ಸಮಯವಿಲ್ಲವೆಂದು, ಬೇರೆಯವರ ಅಥವಾ ಅರ್ಚಕರ ಮೂಲಕ ಪೂಜೆ ಮಾಡಿಸುವುದು ಸರಿಯಲ್ಲವೆಂದು ತಿಳಿಹೇಳಿ, ತನ್ನ ಹಸಿವಿಗೆ ತಾನೇ ಊಟ ಮಾಡಬೇಕು. ಬೇರೆಯವರಲ್ಲ ಎಂದು ಹೇಳುತ್ತಿದ್ದರು ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು.

ಸಂನ್ಯಾಸ ಸ್ವೀಕಾರ

ಜಗದ್ಗುರುಗಳ ಆಜ್ಞೆಯಂತೆ ಪರಿಧಾವಿ ಸಂವತ್ಸರದ ಚೈತ್ರ ಬಹುಳ ಷಷ್ಠಿಯಂದು (7-4-1912) ನರಸಿಂಹಶಾಸ್ತ್ರಿಗಳು ಸಂನ್ಯಾಸ ಸ್ವೀಕರಿಸಿದರು. ಆಗ ಅವರಿಗೆ ಕೇವಲ ಇಪ್ಪತ್ತು ವರ್ಷ. ಶ್ರೀ ಚಂದ್ರಶೇಖರ ಭಾರತೀ ಎಂಬ ನಾಮಾಂಕಿತ ಕೊಡಲಾಯಿತು ಹಾಗೂ ಶ್ರೀಮಠದ ಮೂವತ್ನಾಲ್ಕನೇ ಪೀಠಾಧಿಪತಿಗಳಾದರು. ಹೆಚ್ಚು ಸಮಯ ತಪಸ್ಸಿನಲ್ಲಿಯೇ ಕಳೆಯುತ್ತಿದ್ದ ಅವರು ಸದಾ ಸಮಾಧಿಸ್ಥಿತಿಯಲ್ಲಿರುತ್ತಿದ್ದರು. ಅಂತರ್ದೃಷ್ಟಿ ಮತ್ತು ದಿವ್ಯಜ್ಞಾನ ಹೊಂದಿದ್ದ ಅವರು ಅಪೇಕ್ಷಿತ ಭಕ್ತಜನಕ್ಕೆ ಸೂಕ್ತ ಸಲಹೆಗಳನ್ನು ಕೊಟ್ಟು ಆರ್ತಜನಕ್ಕೆ ಸಾಂತ್ವನ ಹೇಳುತ್ತಿದ್ದರು. ಮಠದಲ್ಲಿ ನಡೆಯುತ್ತಿದ್ದ ಕೆಲಸಕಾರ್ಯಗಳಲ್ಲಿ ಕೆಲವು ನ್ಯೂನತೆಗಳು ದಿವ್ಯದೃಷ್ಟಿಗೆ ಗೋಚರವಾಗಿ ನೌಕರರನ್ನು ಎಚ್ಚರಿಸುತ್ತಿದ್ದರು.

ಕೃತಿಗಳ ರಚನೆ

ಜಗದ್ಗುರುಗಳು ಅನೇಕ ಗ್ರಂಥಗಳನ್ನು ಶ್ಲೋಕಗಳನ್ನು ರಚಿಸಿದ್ದಾರೆ. ಗುರುಸ್ತುತಿ, ಪಾದಾವಲಂಬನ ಸ್ತುತಿ, ದೇಶಿಕನವರತ್ನಮಾಲ, ದತ್ತನವರತ್ನಮಾಲಿಕಾ, ಸಾಂಬಾಷ್ಟಕ, ಶಾರದಾಭುಜಂಗ, ವಿವೇಕ ಚೂಡಾಮಣಿಗೆ ಸಂಸ್ಕೃತ ವ್ಯಾಖ್ಯಾನ - ಹೀಗೆ ಅನೇಕ ಕೃತಿಗಳನ್ನು ರಚಿಸಿರುವರು. ಶೃಂಗೇರಿಮಠದಲ್ಲಿ ಶ್ರೀ ಶಾರದಾ ದೇವಾಲಯದ ನವೀಕರಣ ಮತ್ತು ನರಸಿಂಹವನದಲ್ಲಿ ಗುರುಗಳ ಅಧಿಷ್ಠಾನನಿರ್ವಣ ಹಾಗೂ ಈ ಎರಡರ ಕುಂಭಾಭಿಷೇಕವನ್ನು 1916ರಲ್ಲಿ ನೆರವೇರಿಸಿದರು. ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜನ್ಮಸ್ಥಳ ಕಾಲಟಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದರು.

1931ರಲ್ಲಿ ಶ್ರೀನಿವಾಸ ಎಂಬ ಬ್ರಹ್ಮಚಾರಿಗೆ ಸಂನ್ಯಾಸಾಶ್ರಮವನ್ನು ಅನುಗ್ರಹಿಸಿ 'ಅಭಿನವ ವಿದ್ಯಾತೀರ್ಥ' ಎಂಬ ಯೋಗಪಟ್ಟವನ್ನು ನೀಡಿ ತಮ್ಮ ಉತ್ತರಾಧಿಕಾರಿ ಶಿಷ್ಯರಾಗಿ ಸ್ವೀಕರಿಸಿದರು.

26-9-1954ರ ಮಹಾಲಯ ಅಮಾವಾಸ್ಯೆಯಂದು ಜಗದ್ಗುರುಗಳು ಎಂದಿನಂತೆ ಬೆಳಗಿನ ಜಾವ ತುಂಗಾನದಿಗೆ ಬಂದು ಸ್ನಾನಾದಿಗಳನ್ನು ಮಾಡಿ ಅಲ್ಲಿಯೇ ಧ್ಯಾನಾವಸ್ಥೆಯಲ್ಲಿಯೇ ತುಂಗಾನದಿಯಲ್ಲಿ ಜಲಸಮಾಧಿ ಹೊಂದಿ ದೇಹತ್ಯಾಗ ಮಾಡಿದರು.

ಜನ್ಮ ದಿನ

ಆಶ್ವಯುಜಮಾಸದ ಬಹುಳ ಏಕಾದಶಿಯ ಈ ಶುಭ ದಿನವನ್ನು ಈ ಮಹಾತಪಸ್ವಿಯ ಜನ್ಮ ದಿನವನ್ನಾಗಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ ಮತ್ತು ಆ ದಿನ ಅಧಿಷ್ಠಾನಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಹಿಂದೂ, ಕ್ರೈಸ್ತ, ಮುಸಲ್ಮಾನ, ಶ್ರೀವೈಷ್ಣವ, ಸ್ಮಾರ್ತ - ಹೀಗೆ ಯಾವ ಮತದವರೇ ಆಗಿರಲಿ, ಅವರವರ ಮತದ ತತ್ತ್ವಗಳನ್ನು ಅವರವರು ಶ್ರದ್ಧೆಯಿಂದ ಪಾಲಿಸಬೇಕೆಂದು ಮಹಾಸ್ವಾಮಿಗಳು ಹೇಳುತ್ತಿದ್ದರು.

ಶಾಂತಿ ಮತ್ತು ನೆಮ್ಮದಿಯನ್ನು ಶ್ರದ್ಧೆಯಿಂದ ನಿಮ್ಮಲ್ಲೇ ಕಂಡುಕೊಳ್ಳಿ ಎನ್ನುತ್ತಿದ್ದರು. ಬೆಂಗಳೂರಿನ ಶಂಕರಮಠದ ಆವರಣದಲ್ಲಿ ಶಾರದಾಂಬಾ ದೇವಾಲಯವನ್ನು ಸ್ಥಾಪಿಸಿದ್ದೂ ಅವರೇ.