ಪ್ರಾತಃಸ್ಮರಣೀಯರಾದ ಜಗದ್ಗುರು ಶ್ರೀ ಅಭಿನವ
ವಿದ್ಯಾತೀರ್ಥ ಮಹಾಸ್ವಾಮಿಗಳು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ 35ನೇ ಪೀಠಾಧೀಶರಾಗಿದ್ದವರು.
ವಿಶ್ವವಿಖ್ಯಾತರಾಗಿದ್ದ ಈ ಪರಮಪೂಜ್ಯರ ಜೀವನವು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ.
ಅವರು ಜನಿಸಿದ್ದು ಪಿಂಗಳ ಸಂವತ್ಸರದ ಆಶ್ವಯುಜ
ಬಹುಳ ಚತುರ್ದಶಿಯಂದು (12 ನವೆಂಬರ್ 1917). ತಂದೆ ಕೈಪು ರಾಮಶಾಸ್ತ್ರೀ, ತಾಯಿ ವೆಂಕಟಲಕ್ಷ್ಮೀ. ಶ್ರೀನಿವಾಸನೆಂದು
ನಾಮಕರಣ. ಬಾಲ್ಯದಿಂದಲೇ ದೈವಭಕ್ತಿ, ಇಂದ್ರಿಯ ವಿಷಯಗಳಲ್ಲಿ ವೈರಾಗ್ಯ, ಸಜ್ಜನರಲ್ಲಿ ಪ್ರೀತಿ ಹಾಗೂ
ಸಚ್ಚಾರಿತ್ರ್ಯ - ಇವುಗಳಿಂದ ಕೂಡಿದ್ದರು.
ಆಗ ಶೃಂಗೇರಿ ಶಾರದಾಪೀಠದಲ್ಲಿ ವಿರಾಜಮಾನರಾಗಿದ್ದ
ಪರಮಪೂಜ್ಯ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳ ಕರುಣೆಗೆ ಪಾತ್ರರಾದ ಶ್ರೀನಿವಾಸ ಎಂಬ
ಬಾಲಕನ ಉಪನಯನ ಶೃಂಗೇರಿಯಲ್ಲೇ ನೆರವೇರಿತು. ನಂತರ ತಮ್ಮೊಡನೆ ಬೆಂಗಳೂರಿಗೆ ಹಿಂದಿರುಗಲು ಒಪ್ಪದ ಪುತ್ರನನ್ನು
ರಾಮಶಾಸ್ತ್ರಿಗಳು ಶೃಂಗೇರಿಯ ಪಾಠಶಾಲೆಗೆ ಸೇರಿಸಿದರು. ಅಲ್ಲಿ ವಿದ್ವಾಂಸರಿಂದ ವೇದ-ಸಂಸ್ಕೃತ ಸಾಹಿತ್ಯದ
ಅಧ್ಯಯನ ಮಾಡಿದರು.
ಸಂನ್ಯಾಸ ಸ್ವೀಕಾರ
ಗುರುವರ್ಯರು ಈ ಬಾಲಬ್ರಹ್ಮಚಾರಿಯನ್ನು ಒಂದು ವರ್ಷ ಕಾಲ ಪರೀಕ್ಷಿಸಿ ಒಂದು
ಶುಭದಿನ (1931ರ ಮೇ 22ರಂದು) ಸಂನ್ಯಾಸಾಶ್ರಮವನ್ನಿತ್ತು, 'ಅಭಿನವ ವಿದ್ಯಾತೀರ್ಥ' ಎಂಬ ಆಶ್ರಮನಾಮವನ್ನು
ಅನುಗ್ರಹಿಸಿ, ಪೀಠಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ ನಿಯಮಿಸಿದರು.
ಕಿರಿಯ ಸ್ವಾಮಿಗಳು ಯೋಗವನ್ನು ಕಲಿತು ಅಭ್ಯಾಸ
ಮಾಡುತ್ತಿದ್ದರು. ಮುಂದೆ ನ್ಯಾಯಶಾಸ್ತ್ರದ ವಿಶಿಷ್ಟ ಪ್ರೌಢಿಮೆಯನ್ನು ಗಳಿಸಿ, ವೇದಾಂತಶಾಸ್ತ್ರದ ಅಧ್ಯಯನ
ಮಾಡಿ, ಅದರಲ್ಲೂ ಪಾಂಡಿತ್ಯವನ್ನು ಗಳಿಸಿದರು. ಸಂಸ್ಕೃತಸಾಹಿತ್ಯದಲ್ಲಿ ಪ್ರೌಢಿಮೆಯನ್ನು ಹೊಂದಿದ್ದರು.
ಶ್ರೀ ಅಭಿನವ ವಿದ್ಯಾತೀರ್ಥರ ಗುರುಗಳು ಬಹಳ
ಅಂತಮುಖಿಗಳಾಗಿದ್ದರು. ಮಠದ ಎಲ್ಲ ಕಾರ್ಯಗಳನ್ನೂ ಗಮನಿಸಿ, ಅದರ ಸೂಕ್ತ ನಿರ್ವಹಣೆಯನ್ನು ಸಾಧಿಸಿ,
ಹಾಗೂ ಭಕ್ತರಿಗೆ ದರ್ಶನವನ್ನು ನೀಡಿ ಮತ್ತು ಅವರೊಂದಿಗೆ ಸಂವಾದವನ್ನು ನಡೆಸಿ, ವಿದ್ಯಾತೀರ್ಥರು ಮಠದ
ಕೀರ್ತಿಯನ್ನು ಕಾಪಾಡಿದರು. ಮಹಾಸ್ವಾಮಿಗಳು ಧರ್ಮಶಾಸ್ತ್ರಗ್ರಂಥಗಳನ್ನು ಆಳವಾಗಿ ಪರಿಶೀಲಿಸಿ, ಧರ್ಮಕ್ಕೆ
ಸಂಬಂಧಪಟ್ಟ ಶಿಷ್ಯರ ಸಂದೇಹಗಳನ್ನು, ಪ್ರಮಾಣವಚನ ಮತ್ತು ಉದಾಹರಣೆಗಳ ಸಹಿತವಾಗಿ ಪರಿಹರಿಸುತ್ತಿದ್ದರು;
ಇದಕ್ಕೆ ಗುರುಗಳ ಮೆಚ್ಚುಗೆಯೂ ಲಭಿಸಿತ್ತು.
ಸಂಸ್ಕೃತ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ
ನಿರರ್ಗಳವಾಗಿ ಮಾತನಾಡಲು ಸಮರ್ಥರಾದ ಅವರು ಹಿಂದಿಭಾಷೆಯಲ್ಲೂ ಪ್ರಾವೀಣ್ಯವನ್ನು ಸಂಪಾದಿಸಿದ್ದರು.
1954ರ ಆಗಸ್ಟ್ 24ರಂದು ಜಗದ್ಗುರು ಶ್ರೀ ಚಂದ್ರಶೇಖರಭಾರತೀ
ಮಹಾಸ್ವಾಮಿಗಳ ದರ್ಶನಕ್ಕಾಗಿ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಶೃಂಗೇರಿಗೆ
ಆಗಮಿಸಿದರು. ಆ ಸಂದರ್ಭದಲ್ಲಿ ಅವರಿಗೆ ಗುರುಗಳ ದರ್ಶನ-ಸಂಭಾಷಣೆಗೆ ವ್ಯವಸ್ಥೆಯನ್ನು ಮಾಡಿ, ಗುರುಗಳ
ಸಂಸ್ಕೃತಭಾಷೆಯ ಸಂದೇಶವನ್ನು ವಿದ್ಯಾತೀರ್ಥರು ಹಿಂದಿಯಲ್ಲಿ ತಿಳಿಸಿದರು ಮತ್ತು ಅವರು ಹಿಂದಿಯಲ್ಲಿ
ಮಾತನಾಡಿದ್ದನ್ನು ತಮ್ಮ ಗುರುಗಳಿಗೆ ಸಂಸ್ಕೃತದಲ್ಲಿ ನಿವೇದಿಸಿದರು.
ಪಟ್ಟಾಭಿಷೇಕ ಮತ್ತು ಯಾತ್ರೆಗಳು
ಜಯಸಂವತ್ಸರದ ಆಶ್ವಯುಜ ಕೃಷ್ಣ ಪಂಚಮಿಯಂದು
(16.10.1954) ಶ್ರೀ ಅಭಿನವ ವಿದ್ಯಾತೀರ್ಥರು ಶೃಂಗೇರಿ ಶಾರದಾಪೀಠದಲ್ಲಿ ಪಟ್ಟಾಭಿಷಿಕ್ತರಾದರು.
1956ರಲ್ಲಿ ಶೃಂಗೇರಿಯಿಂದ ಯಾತ್ರೆಯನ್ನು ಪ್ರಾರಂಭಿಸಿ, ಕಾಲಟೀ ಕ್ಷೇತ್ರವನ್ನು ತಲುಪಿ, ಅಲ್ಲಿ ಚಾತುರ್ಮಾಸ
ವ್ರತವನ್ನು ಕೈಗೊಂಡು, ನವರಾತ್ರಿ ಉತ್ಸವಗಳನ್ನು ನೆರವೇರಿಸಿದರು. ದಕ್ಷಿಣಭಾರತದಲ್ಲಿ ಆರು ವರ್ಷ ಸತತವಾಗಿ
ಯಾತ್ರೆ ಹಾಗೂ ನಂತರದಲ್ಲಿ ಹಿಮಾಲಯದತ್ತ ವ್ಯಾಪಕವಾಗಿ ಯಾತ್ರೆ ನಡೆಸಿದರು.
ಗಂಭೀರವಾದ ವೇದಾಂತತತ್ತ್ವಗಳೂ ಜನಸಾಮಾನ್ಯರಿಗೆ
ಸುಲಭವಾಗಿ ತಿಳಿಯುವಂತೆ ಬೋಧಿಸುತ್ತಿದ್ದರು. ವ್ಯರ್ಥ ಹರಟೆಗೆ ಅವಕಾಶ ಕೊಡುತ್ತಿರಲಿಲ್ಲ. ಅವರಲ್ಲಿ
ಕರುಣೆಯು ತುಂಬಿ ತುಳುಕುತ್ತಿತ್ತು. ಜೀವನವು ಇತರರಿಗೆ ಒಳಿತನ್ನು ಮಾಡುವುದಕ್ಕಾಗಿ ಎಂದು ಅವರು ಪರಿಗಣಿಸಿದರು.
ಅನ್ಯರು ಅವರಿಗೆಸಗಿದ ತಪ್ಪನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಅವರು ಶೃಂಗೇರಿಯಲ್ಲಿ
ಅನೇಕ ಯೋಜನೆಗಳನ್ನು ಪ್ರಾರಂಭಿಸಿದರು. ಅವರ ಪೀಠಾಧಿಪತ್ಯದ ಅವಧಿಯಲ್ಲಿ ಮಠದಿಂದ ಅನೇಕ ಗ್ರಂಥಗಳು ಪ್ರಕಟವಾದವು.
ಭಾರತೀಯ ಸಂಸ್ಕೃತಿಯಂತೂ ಸಂಸ್ಕೃತವನ್ನೇ ಆಶ್ರಯಿಸಿದೆ. ಸಂಸ್ಕೃತವನ್ನು ಕಲಿಯಲು ಜಾತಿ-ಮತ-ಲಿಂಗ-ವಯಸ್ಸು ಇತ್ಯಾದಿ ಯಾವ ಭೇದವೂ ಇಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.