ಪ್ರದೋಷ

ಪ್ರದೋಷ ಪದವು ಹಿಂದೂ ಪಂಚಾಂಗದಲ್ಲಿ ಪ್ರತಿ ಪಕ್ಷದ ಹದಿಮೂರನೇ ದಿನ ನಡೆಯುವ ಅರ್ಧಮಾಸಿಕ ಘಟನೆಯನ್ನು ಸೂಚಿಸುತ್ತದೆ. ಇದು ಶಿವನ ಪೂಜೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಮಂಗಳಕರವಾದ ಗಂಟೆಯ ಅವಧಿ, ಅಂದರೆ ಸೂರ್ಯಾಸ್ತಕ್ಕೆ ಒಂದೂವರೆ ಗಂಟೆ ಮೊದಲು ಮತ್ತು ನಂತರದ ಅವಧಿಯು ಶಿವನ ಪೂಜೆಗಾಗಿ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ. ಅವಧಿಯಲ್ಲಿ ಮಾಡಲಾದ ಉಪವಾಸ ಅಥವಾ ವ್ರತವನ್ನು "ಪ್ರದೋಷ ವ್ರತ"ವೆಂದು ಕರೆಯಲಾಗುತ್ತದೆ. ಭಕ್ತನು ರುದ್ರಾಕ್ಷಿ, ವಿಭೂತಿಗಳನ್ನು ಧರಿಸಿ ಶಿವನನ್ನು ಅಭಿಷೇಕ, ಗಂಧದ ಲೇಪನ ದ್ರವ್ಯ, ಬಿಲ್ವಪತ್ರೆ, ಸುಗಂಧ ದ್ರವ್ಯ, ದೀಪ ಮತ್ತು ನೈವೇದ್ಯದಿಂದ ಪೂಜಿಸಬೇಕು.

ವ್ಯುತ್ಪತ್ತಿ

ಪ್ರದೋಷ ಪದದ ವ್ಯುತ್ಪತ್ತಿ ಹೀಗಿದೆ - ಪ್ರದೋಷನು ಕಲ್ಪ ಮತ್ತು ದೋಷ ಇವರ ಮಗನಾಗಿದ್ದಾನೆ. ಅವನಿಗೆ ನಿಶಿತ ಮತ್ತು ವ್ಯುಸ್ಥ ಎಂಬ ಹೆಸರಿನ ಇಬ್ಬರು ಸೋದರರಿದ್ದಾರೆ. ಮೂರು ಹೆಸರುಗಳ ಅರ್ಥ ರಾತ್ರಿಯ ಆರಂಭ, ಮಧ್ಯಭಾಗ ಮತ್ತು ಅಂತ್ಯ ಎಂಬುದಾಗಿದೆ. ಪ್ರತಿ ತಿಂಗಳಲ್ಲಿ ಮತ್ತು ಪ್ರತಿ ಪಕ್ಷದ ಅವಧಿಯಲ್ಲಿ, ತ್ರಯೋದಶಿಯು ದ್ವಾದಶಿಯ ಅಂತ್ಯವನ್ನು ಸೇರುವಾಗಿನ ಸಮಯ ಬಿಂದುವನ್ನು ಪ್ರದೋಷ ಎಂದು ಕರೆಯಲಾಗುತ್ತದೆ.