ಹಂಪಿ

ವಿಶ್ವವಿಖ್ಯಾತ ಹಂಪಿಯಲ್ಲಿ ವಿಜಯನಗರದ ಕಾಲದಲ್ಲಿ ನಿರ್ಮಾಣವಾಗಿರುವ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಎಲ್ಲರ ಕಣ್ಮನ ಸೆಳೆಯುತ್ತಿದೆ. ತುಂಗಭದ್ರಾ ನದಿ ತಟದಲ್ಲಿ ಸುಂದರವಾದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಉತ್ತರಾಭಿಮುಖವಾಗಿ ದೇಗುಲವಿದೆ. ಎತ್ತರದ ಕೋದಂಡ (ಬಿಲ್ಲನ್ನು) ವನ್ನು ಹಿಡಿದು ತನ್ನ ಪರಿವಾರದೊಂದಿಗೆ ನಿಂತಿರುವುದರಿಂದ ಕೋದಂಡ ಎಂಬ ಹೆಸರಿನಿಂದ ಶ್ರೀರಾಮನನ್ನ ಕರೆಯಲಾಗುತ್ತದೆ.

ಶಿಲ್ಪ ಕೆತ್ತನೆ

ದೇವಸ್ಥಾನದಲ್ಲಿ ಆಯತಾಕಾರದ ಗರ್ಭಗೃಹ, ಸಭಾ ಮಂಟಪ, ಮುಖಮಂಟಪ ಮತ್ತು ದೀಪಸ್ತಂಭಗಳಿವೆ. ಗರ್ಭಗುಡಿಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಸೇರಿದಂತೆ ಆಂಜನೇಯ ಉಬ್ಬುಶಿಲ್ಪಗಳನ್ನು ಬೃಹತ್ ಬಂಡೆಯಲ್ಲಿ ಕೆತ್ತಲಾಗಿದೆ. ಸಮಭಂಗಿಯಲ್ಲಿ ನಿಂತಿರುವ ರಾಮ ಮತ್ತು ಲಕ್ಷ್ಮಣ ಕೈಗಳಲ್ಲಿ ದೊಡ್ಡದಾದ ಬಿಲ್ಲು ಮತ್ತು ಬಾಣಗಳಿವೆ. ಸೀತೆಯ ಬಲಗೈಯಲ್ಲಿ ಪದ್ಮವನ್ನು ಕಾಣಬಹುದು. ಶಿಲ್ಪಗಳ ಮೇಲ್ಭಾಗದಲ್ಲಿ ಕೀರ್ತಿಮುಖದ ಪ್ರಭಾವಳಿ ಹಾಗೂ ರಾಮನ ತೆಲೆಯ ಮೇಲೆ ಏಳು ಹೆಡೆಗಳುಳ್ಳ ಸರ್ಪವಿದೆ. ಇನ್ನು ಗರ್ಭಗೃಹದ ಮೇಲ್ಭಾಗದಲ್ಲಿ ದ್ವಿತಗಳುಳ್ಳ ಶಿಖರವಿದ್ದು, ಅದರ ಕಳಸವನ್ನು ಪ್ರತಿಷ್ಠಾಪಿಸಿರುವುದನ್ನು ನೋಡಬಹುದಾಗಿದೆ.

ಸಂಬಂಧ ಸಾಕ್ಷಿ

ವಿರೂಪಾಕ್ಷೇಶ್ವರ ಹಾಗೂ ಕೋದಂಡರಾಮನಿಗೂ ವಿಶೇಷ ಸಂಬಂಧವಿರುವುದನ್ನು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ತಿಳಿದು ಬರುತ್ತದೆ. ಏಕೆಂದರೆ ಹಂಪಿಯಲ್ಲಿ ನಡೆಯುವ ಫಲಪೂಜಾ ಮಹೋತ್ಸವ ಇದಕ್ಕೆ ಸಾಕ್ಷಿಯಾಗಿದೆ. ಪಂಪಾ-ವಿರೂಪಾಕ್ಷರ ವಿವಾಹ ನಿಶ್ಚಿತಾರ್ಥ, ಪಂಪಾ-ವಿರೂಪಾಕ್ಷರ ಕಲ್ಯಾಣ ಮಹೋತ್ಸವ, ಮೆರವಣಿಗೆ, ಜಾತ್ರೆ ಮತ್ತು ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ಕಾರ್ಯಕ್ರಮಗಳು ಕೋದಂಡರಾಮನ ದೇವಸ್ಥಾನದಲ್ಲಿ ನಡೆಯುವುದು ವಿಶೇಷ.

ದೇವಸ್ಥಾನ ಮುಂದೆ ಉತ್ತರಾಭಿಮುಖವಾಗಿ ತುಂಗಭದ್ರಾ ನದಿ ಹರಿಯುತ್ತದೆ. ಹಾಗಾಗಿ ಇದು ಪವಿತ್ರ ಸ್ಥಳವೆಂಬುದು ಜನರ ನಂಬಿಕೆಯಾಗಿದೆ.‌ ಚಕ್ರತೀರ್ಥದಲ್ಲಿ ಶೈವರು, ಜೈನರು, ವೈಷ್ಣವರು ತಮ್ಮ ಶಿಲ್ಪಗಳನ್ನು ಕೆತ್ತನೆ ಮಾಡಿರುವುದನ್ನು ನೋಡಬಹುದಾಗಿದೆ. ಕೋಟಿಲಿಂಗ, ವಿಷ್ಣುವಿನ ದಶಾವತಾರ, ವಿಷ್ಣುವಿನ 24 ಹೆಸರುಗಳನ್ನು ಸಹ ಕೆತ್ತಲಾಗಿದೆ.

ಚಕ್ರತೀರ್ಥದಲ್ಲಿ ಸೂರ್ಯನಾರಾಯಣ, ಶ್ರೀನಿವಾಸ ದೇವಾಲಯಗಳಿವೆ. ಅಲ್ಲದೇ, ಚಕ್ರಾಕಾರದ ಯಂತ್ರದ ನಡುವೆ ಕೈಯಲ್ಲಿ ಮಾಲೆ ಹಿಡಿದು ಧ್ಯಾನದಲ್ಲಿ ಕುಳಿತಿರುವ ಆಂಜನೇಯ ದೇವರ ಉಬ್ಬು ಶಿಲ್ಪವಿದೆ. ಇದನ್ನು ಯಂತ್ರೋದ್ಧಾರಕ ಪ್ರಾಣದೇವರ ಹೆಸರಿನಿಂದ ಕರೆಯಲಾಗುತ್ತದೆ.