ಅಕ್ಕಮಹಾದೇವಿ
ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಲ್ಲದೆ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು
ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ಪ್ರತಿಪಾದಕಿಯಾಗಿ,
ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು
ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ
ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ
ಮಾದರಿಯಾಗಿದ್ದಾಳೆ.
ಶರಣೆ
ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ
ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಈ ಗ್ರಾಮ ಶಿಕಾರಿಪುರದಿಂದ
ಸುಮಾರು 15 ಕಿ.ಮಿ. ಹಾಗೂ ಶಿರಾಳ ಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ
ಪ್ರಸಿದ್ದವಾಗಿದೆ.
ಉಡುತಡಿಯಿಂದ
ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು,
ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ
ತೊಡಗಿಸಿಕೊಂಡರಲ್ಲದೇ, "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ
(ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.
ಅಕ್ಕನ ಅನುಭಾವ ಜೀವನ
ಅಕ್ಕಮಹಾದೇವಿ
ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ವಚನ ಚಳುವಳಿಯ ಸಮಯದಲ್ಲಿ, ಅಲ್ಲಮ
ಮತ್ತು ಅಕ್ಕ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅಕ್ಕನ
ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ಅವರ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ,
ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ .
ಅಕ್ಕನ ಹಿರಿಮೆ
ಅಕ್ಕಮಹಾದೇವಿಯವರ
ಜೀವನದಲ್ಲಿ ನಿರ್ಣಾಯಕ ಘಟನೆಗಳಲ್ಲಿ, ಪ್ರಮುಖವಾದವುಗಳು ಎರಡು. ಒಂದನೆಯದು: ಅಧಿಕಾರ, ಸಂಪತ್ತು, ವೈಭವ,
ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಲ್ಲಿ
ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು.
ಎರಡನೆಯದು: ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದುದು.
ಈಕೆ ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. "ಯೋಗಾಂಗತ್ರಿವಿಧಿ" ಅಕ್ಕಮಹಾದೇವಿಯ ಪ್ರಮುಖ ಕೃತಿ.