ನಾಗ-ಗರುಡ ಪಂಚಮಿ

ಈ ವ್ರತವನ್ನು ಶ್ರಾವಣ ಶುಕ್ಲ ಪಂಚಮಿ ದಿನ ಪ್ರತಿ ವರ್ಷವೂ ಭಕ್ತರು ಆಚರಿಸುತ್ತಾರೆ. ಉಳಿದ ಎಲ್ಲಾ ವ್ರತಗಳಿಗಿಂತಲೂ ಕಟ್ಟುನಿಟ್ಟಾಗಿ ಇದನ್ನು ಅನುಷ್ಠಾನಮಾಡುವರು. ಅಣ್ಣ, ತಮ್ಮ, ಅಕ್ಕ, ತಂಗಿಯರು ಈ ದಿನ ಒಟ್ಟುಗೂಡಿ ನಾಗದೇವತೆಯನ್ನು ಪೂಜಿಸಿ 'ತನಿ' (ಹಾವಿನ ಹುತ್ತಕ್ಕೆ ಮತ್ತು ಸಹೋದರರಿಗೆ) ಎರೆದು ತಾವೂ ಎರೆಸಿಕೊಳ್ಳುವ ಪದ್ಧತಿಯಿದೆ.

ಚತುರ್ಥೀ ದಿನ ಬೆಳಗ್ಗೆ ನಿರಾಹಾರನಾಗಿದ್ದು ರಾತ್ರೆ ಭೋಜನಮಾಡಿ ಪಂಚಮಿ ದಿನ ನಾಗಪೂಜೆಯನ್ನು ಮಾಡಬೇಕು. ಇವುಗಳನ್ನು ಬೆಳ್ಳಿ, ಮರ ಅಥವಾ ಮಣ್ಣಿನಿಂದ ಮಾಡಿದ ಬಿಂಬಗಳನ್ನಿಟ್ಟು ರಂಗೋಲಿಯಲ್ಲಿ ಚಿತ್ರವನ್ನು ಬರೆದು ಅರ್ಚಿಸಬೇಕು. ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ - ಮುಂತಾದ ಸುಪ್ರಸಿದ್ಧ ನಾಗಗಳನ್ನು ಈ ಪೂಜೆಯಲ್ಲಿ ಆಹ್ವಾನಿಸುವ ಸಂಪ್ರದಾಯವಿದೆ. ಅರಿಸಿನ, ಕುಂಕುಮ, ಕರವೀರ ಪಂಚಕಾದಿ ಪುಷ್ಪಗಳಿಂದ ಅರ್ಚಿಸಬೇಕು. ಧೂಪದೀಪ, ನೈವೇದ್ಯ, ತಾಂಬೂಲ, ನೀರಾಜನಾದಿಗಳನ್ನು ಎಲ್ಲಾ ವ್ರತಗಳಂತೆಯೇ ಸಮರ್ಪಿಸಬೇಕು. ಕೆಲವೆಡೆ ಶಾಸ್ತ್ರ ರೀತ್ಯಾ ಪಂಚಾಮೃತ, ಲಾಜ(ಅರಳು)ಗಳಿಂದಲೂ ಪೂಜಿ ಸುವರು. ಅನಂತರ ತುಪ್ಪ, ಪಾಯಸ - ಇತ್ಯಾದಿ ದೇವರಿಗೆ ನೈವೇದ್ಯ ಮಾಡಿದ ಪದಾರ್ಥಗಳಿಂದ ಬಂಧು ಬಳಗಕ್ಕೆ ಭೋಜನವನ್ನು ಮಾಡಿಸಬೇಕು. ವ್ರತದ ಕೊನೆಯಲ್ಲಿ ಪಾರಣೆ(ಊಟ)ಯನ್ನು ಮಾಡಬೇಕು.

‘ತನಿ’ ಎರೆಯುವ ವಿಚಾರ

ನಾಗದೇವತೆಯ ಪೂಜೆಯು ಭ್ರಾತೃಪ್ರೇಮವನ್ನು ಸೋದರನ ಶ್ರೇಯಸ್ಸನ್ನೂ ಉಂಟುಮಾಡುವದೆಂದು ನಂಬಿಕೆಯಿದೆ. ಮಕ್ಕಳಿಲ್ಲದವರಿಗೆ ಮಕ್ಕಳಾಗುವದೂ ಆ ದೇವತೆಯ ಪ್ರಸಾದದಿಂದಲೇ ಎಂದು ಕೆಲವು ಶಾಸ್ತ್ರವಾಕ್ಯಗಳು ಸಿಗುತ್ತವೆ. ಆದ್ದರಿಂದ ಮೊದಲು ನಾಗದೇವತೆಗೆ ಬೆನ್ನಿಗೆ ಹಾಲನ್ನು ಚಿಮುಕಿಸಿ ಲಾಜ(ಅರಳು)ವನ್ನು ಅರ್ಪಿಸುವುದು, ಅನಂತರ ಆ ದೇವತೆಯ ಪ್ರಸಾದವಾಗಿ ಸೋದರರುಗಳು, ಸೋದರಿಯರು ಒಬ್ಬರಿಗೊಬ್ಬರು ಬೆನ್ನಿಗೆ ಹಾಲು ಚಿಮುಕಿಸಿಕೊಳ್ಳುವದು ರೂಢಿ.

ನಾಗಪಂಚಮಿಯ ಮಹತ್ವ

ಪೌರಾಣಿಕದೃಷ್ಟಿಯಿಂದ ವಿಚಾರಮಾಡಿದರೆ ನಾಗನೆಂಬ ಅನಂತನು ಭಗವಾನ್ ಮಹಾವಿಷ್ಣುವಿನ ಹಾಸಿಗೆಯಾಗಿದ್ದಾನೆ. ಪರಮೇಶ್ವರನ ಆಭರಣಗಳಾಗಿದ್ದಾನೆ. ಭೂದೇವಿಯನ್ನು ಹೊತ್ತಿರುವ ಆಧಾರಶಕ್ತಿಯಾಗಿದ್ದಾನೆ. ಯೋಗಿಗಳ ಮೂಲಾಧಾರ ಚಕ್ರನಿವಾಸಿಯಾಗಿದ್ದಾನೆ. ಸಮುದ್ರಮಂಥನ ಕಾಲದಲ್ಲಿ ಮಂದರವನ್ನೆಳೆಯುವ ಹಗ್ಗವಾಗಿದ್ದಾನೆ ಇತ್ಯಾದಿ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರಂತೂ 'ಅನಂತ'ನೆಂಬ ಹೆಸರು ಪರಮಾತ್ಮನದೇ ಆಗಿದೆ. ವೇದಗಳಲ್ಲಿಯೂ ನಾಗದೇವತೆಗಳನ್ನು ಕುರಿತ ಸ್ತೋತ್ರಗಳ ರೂಪವಾದ ಸೂಕ್ತಗಳೂ ಮಂತ್ರಗಳೂ ಇವೆ. ಆದ್ದರಿಂದ ನಾಗಪೂಜೆಯು ವೈದಿಕವೆಂದೂ ತಿಳಿಯಬಹುದಾಗಿದೆ.