ಉಳ್ಳಾಲ್ತಿ ಜಾತ್ರೆ

ಐದು ಉಳ್ಳಾಲ್ತಿ ಕ್ಷೇತ್ರಗಳು

ಸುಳ್ಳಮಲೆ ಬೆಟ್ಟದ ತಪ್ಪಲಿನಲ್ಲಿ ಕಂಬಳ ಮತ್ತು ಬಾಕಿಮಾರು ಗದ್ದೆಗಳ ಸೌಂದರ್ಯಗಳ ಮಧ್ಯೆ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರವಿದೆ. ಮಾಣಿ, ಅನಂತಾಡಿ, ಕೆಲಿಂಜ, ಕೇಪು, ಬಲ್ನಾಡು ದೈವಸ್ಥಾನಗಳು ತುಳುನಾಡಿನ ಇತಿಹಾಸದಲ್ಲಿ ಬರುವ ಐದು ಉಳ್ಳಾಲ್ತಿ ಕ್ಷೇತ್ರಗಳು ಹಾಗೂ ಬಹಳಷ್ಟು ಕಾರಣಿಕ ಹೊಂದಿರುವ ಕ್ಷೇತ್ರಗಳೂ ಆಗಿವೆ. ಕ್ಷೇತ್ರದ ಪ್ರಧಾನ ದೈವ ಉಳ್ಳಾಲ್ತಿ ಅಮ್ಮನವರಾದರೆ, ಗುಡ್ಡದ ಚಾಮುಂಡೇಶ್ವರೀ, ಪಂಜುರ್ಲಿ, ಮಲೆಕೊರತಿ ಗ್ರಾಮದ ಪ್ರಧಾನ ದೈವಗಳಾಗಿವೆ. ಉಳ್ಳಾಲ್ತಿ ಮಾತೆಗೆ ಒಂದು ಕಾಲಾವಧಿ ಮೆಚ್ಚಿ ಜಾತ್ರೆಯಾದರೆ, ದೈವಗಳಿಗೆ ಗ್ರಾಮದಲ್ಲಿ ಕಾಲಾವಧಿಯಲ್ಲಿ ಏಳು ನೇಮಗಳು ನಡೆಯುತ್ತವೆ. ನಾಗಾರಾಧನೆಯೂ ಪ್ರಮುಖವಾಗಿ ನಡೆದುಕೊಂಡು ಬಂದಿದೆ. ವರ್ಷಕ್ಕೊಮ್ಮೆ ಕಂಬಳವನ್ನು ಸಿಂಗರಿಸಿ, ಅನ್ನದಾನ ನಡೆದು ಕಂಬಳಕೋರಿ ಎನ್ನುವ ವಿಶಿಷ್ಟ ಧಾರ್ಮಿಕ ಕಾರ್ಯ ಸುಸೂತ್ರವಾಗಿ ನಡೆಯುತ್ತದೆ. ಪ್ರತೀ ತಿಂಗಳು ಸಂಕ್ರಮಣದಂದು ಉಳ್ಳಾಲ್ತಿ ಮಾತೆಗೆ ಸೇವೆಗಳು ನಡೆದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಕೊಡಿಯೇರುವುದು
ಮಾಣಿಗುತ್ತು ಚಾವಡಿಯಿಂದ ಹೊರಡುವ ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ದೈವಗಳ ಭಂಡಾರ ಬಾಕಿಮಾರು ಗದ್ದೆಯಲ್ಲಿ ಸಾಗಿ ಕ್ಷೇತ್ರಕ್ಕೆ ಅದ್ದೂರಿಯಿಂದ ಆಗಮಿಸುತ್ತದೆ.  ಸಂದರ್ಭ ಅಲಂಕೃತ ಪಲ್ಲಕಿಯಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರು  ವಿರಾಜಮಾನರಾಗಿರುತ್ತಾರೆ. ಭಂಡಾರ ಆಗಮಿಸಿದ ಬಳಿಕ ಕೊಡಿಯೇರುವುದು ಸಂಪ್ರದಾಯವಾಗಿದೆ.

ಮೆಚ್ಚಿ ಜಾತ್ರೆಯಂದು ಆರಂಭದಲ್ಲಿ ಬ್ರಹ್ಮರಿಗೆ ಸೇವೆಯಾಗಿ ಬಳಿಕ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಸೇವೆಯಾಗುತ್ತದೆ. ದೊಡ್ಡ ಗಾತ್ರದ ಹಾಳೆ ಅಣಿಯಲ್ಲಿ ಹೂ, ಬೆಳ್ಳಿ, ಬಂಗಾರದಿಂದ ಅಲಂಕಾರಗೊಂಡು ಶ್ರೀ ಉಳ್ಳಾಲ್ತಿ ಅಮ್ಮನವರ ಬೆಳ್ಳಿಯ ಮೊಗ ಧರಿಸಿ, ಮೆಚ್ಚಿ ಜಾತ್ರೆಯ ವೈಭವದ ಸೇವೆಯಾಗುತ್ತದೆ.