ವಾದಿರಾಜ ಜಯಂತಿ

ವಾದಿರಾಜರು (ಕ್ರಿ.. ೧೪೮೦ - ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು. ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನ ಕವಿತೆ ತರ್ಕಬದ್ಧವಾದುದು. ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆಪ್ರಸಂಗಾಭರಣ ತೀರ್ಥ’ ಎಂಬ ಬಿರುದನ್ನು ನೀಡಿ ಗೌರವಿಸಿದರು. ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು. ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.

ಜೀವನ

ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ.  ಪೂರ್ವಾಶ್ರಮದ ಹೆಸರು ಭೂವರಾಹ.

ಅವರ ಇಷ್ಟ ದೈವ ಶ್ರೀಹರಿ ಅವರಿಗೆ ಹಯವದನ ಅಥವಾ ಕುದುರೆಯ ರೂಪದಲ್ಲಿ ದರ್ಶನ ಕೊಟ್ಟನಂತೆ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ ಸನ್ಯಾಸ ಜೀವನದ ಅವಧಿ ೧೧೨ ವರ್ಷಗಳು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಮಠ ಮತ್ತು ಇವರ ಬೃಂದಾವನವಿದೆ.

ಸಾಹಿತ್ಯ ಕೃತಿಗಳು

ಕನ್ನಡದಲ್ಲಿ ಹಯವದನ ಎಂಬ ಅಂಕಿತ ನಾಮದಲ್ಲಿ ಅನೇಕ ದೇವರನಾಮಗಳು, ಕೀರ್ತನೆಗಳು, ಸುಳಾದಿ, ಉಗಾಭೋಗ, ವೃತ್ತನಾಮಗಳನ್ನು ರಚಿಸಿದ್ದಾರೆ. ಶಾಸ್ತ್ರೀಯ ಯುಕ್ತಿಗಳನ್ನು ಸಾಹಿತ್ಯ ಮುದ್ರೆಯಿಂದ ಮನಸ್ಸಿಗೆ ನೆಡುವಂತೆ ಸರಳವಾದ ಪ್ರೌಢ ಕನ್ನಡ ನುಡಿಯಲ್ಲಿ ಮುಖ್ಯ ಪ್ರಮೇಯವಾದ ಭಕ್ತಿಯಿಂದ ಶ್ರೀಹರಿಯನ್ನು ಒಲಿಸಿ ಮುಕ್ತಿಯನ್ನು ಪಡೆಯಬೇಕೆಂಬುದನ್ನು ತಿಳಿಸಿದರು.