ಮಾಘಸ್ನಾನ


ಮಾಘಸ್ನಾನವೆಂದರೆ ಮಾಘ ಮಾಸದಲ್ಲಿ ಪವಿತ್ರ ತೀರ್ಥಕ್ಷೇತ್ರಗಳಲ್ಲಿರುವ ಜಲಮೂಲಗಳಲ್ಲಿ ಮಾಡುವ ಸ್ನಾನ. ಬ್ರಹ್ಮಾ, ವಿಷ್ಣು, ಮಹೇಶ, ಆದಿತ್ಯ ಮತ್ತು ಇತರ ಎಲ್ಲ ದೇವತೆಗಳು ಮಾಘ ಮಾಸದಲ್ಲಿ ವಿವಿಧ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುತ್ತಾರೆ. ಆದ್ದರಿಂದ ಈ ಕಾಲದಲ್ಲಿ ಮಾಘಸ್ನಾನ ಮಾಡಲು ಹೇಳಲಾಗಿದೆ.

ಮಾಘಸ್ನಾನದ ಕಾಲಾವಧಿ

ಈಗಿನ ರೂಢಿಗನುಸಾರ ಮಾಘಸ್ನಾನವು ಪುಷ್ಯ ಹುಣ್ಣಿಮೆಗೆ ಆರಂಭವಾಗಿ ಅದು ಮಾಘ ಹುಣ್ಣಿಮೆಗೆ ಮುಕ್ತಾಯವಾಗುತ್ತದೆ (ಜನವರಿ-ಫೆಬ್ರವರಿಯ ಮಧ್ಯದಲ್ಲಿ).

ಮಾಘಸ್ನಾನದ ಮಹತ್ವ

ಮಾಘಸ್ನಾನದಿಂದ ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ ಮತ್ತು ಶರೀರವು ಅರೋಗ್ಯವಂತವಾಗುತ್ತದೆ. ಶರೀರದ ರೋಗನಿರೋಧಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ರೋಗಾಣುಗಳನ್ನು ನಾಶ ಮಾಡುತ್ತದೆ. ಮಾಘಸ್ನಾನದಿಂದ ಎಲ್ಲ ಪಾಪಗಳಿಂದ ಮುಕ್ತಿ ಸಿಗುತ್ತದೆ. ಮಹಾಭಾರತದ ಅನುಶಾಸನ ಪರ್ವದಲ್ಲಿ ‘ಮಾಘ ಮಾಸದಲ್ಲಿ ಯಾರು ಪ್ರಯಾಗ ಸಂಗಮದಲ್ಲಿ ಪವಿತ್ರ ನದಿಗಳಲ್ಲಿ ಭಕ್ತಿಭಾವದಿಂದ ಸ್ನಾನ ಮಾಡುತ್ತಾರೋ, ಅವರು ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗಿದೆ. ಮಾಘಸ್ನಾನದಿಂದ ಸಾಂಸಾರಿಕ ಇಚ್ಛೆಗಳು ಪೂರ್ಣವಾಗುತ್ತದೆ ಮತ್ತು ಮೋಕ್ಷಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಮಾಘಸ್ನಾನಕ್ಕಾಗಿ ಪವಿತ್ರ ಜಲಮೂಲಗಳು

ಮಾಘ ಮಾಸದಲ್ಲಿ ಪ್ರಯಾಗ, ವಾರಣಾಸಿ, ನೈಮಿಷಾರಣ್ಯ, ಹರಿದ್ವಾರ ಮತ್ತು ನಾಸಿಕ ಮುಂತಾದ ಪವಿತ್ರ ತೀರ್ಥಕ್ಷೇತ್ರಗಳಲ್ಲಿರುವ ಜಲಮೂಲಗಳಲ್ಲಿ ಸ್ನಾನವನ್ನು ಮಾಡಲಾಗುತ್ತದೆ. ಕನ್ಯಾಕುಮಾರಿ ಮತ್ತು ರಾಮೇಶ್ವರಮ್ ಈ ತೀರ್ಥಕ್ಷೇತ್ರಗಳಲ್ಲಿ ಮಾಡಲಾಗುವ ಸ್ನಾನವೂ ಧರ್ಮಶಾಸ್ತ್ರಕ್ಕನುಸಾರ ಉಚ್ಚಕೋಟಿಯದೆಂಬ ನಂಬಿಕೆ ಇದೆ. ಕರ್ನಾಟಕದ ಕಾವೇರಿ, ತುಂಗಭದ್ರಾ, ಕೃಷ್ಣಾ ಇತ್ಯಾದಿ ನದಿಗಳಲ್ಲಿಯೂ ಈ ಸ್ನಾನವನ್ನು ಶ್ರದ್ಧಾಭಾವದಿಂದ ಮಾಡುತ್ತಾರೆ. ಇದರೊಂದಿಗೆ ರಾಜಸ್ಥಾನದ ಪುಷ್ಕರ ಸರೋವರದಲ್ಲಿ ಮಾಡಿದ ಸ್ನಾನವೂ ಪವಿತ್ರವಾಗಿದೆ.

ಮಾಘಸ್ನಾನಕ್ಕಾಗಿ ಯೋಗ್ಯ ದಿನ

ಪ್ರಯಾಗ ತೀರ್ಥಕ್ಷೇತ್ರದಲ್ಲಿ ಮೂರು ಬಾರಿ ಸ್ನಾನ ಮಾಡುವುದರಿಂದ ಸಿಗುವ ಫಲ ಹತ್ತು ಸಾವಿರ ಅಶ್ವಮೇಧ ಯಜ್ಞವನ್ನು ಮಾಡಿದ ಫಲಕ್ಕಿಂತಲೂ ಹೆಚ್ಚಿದೆ. ಕೆಲವು ವಿಶಿಷ್ಟ ತಿಥಿಗಳಂದು ಮಾಡಲಾಗುವ ಮಾಘಸ್ನಾನವು ವಿಶೇಷ ಫಲ ನೀಡುತ್ತದೆ.

ಮಾಘಸ್ನಾನಕ್ಕಾಗಿ ಯೋಗ್ಯ ಸಮಯ

ಸೂರ್ಯೋದಯದ ಮೊದಲಿನ ಸಮಯವನ್ನು ಸ್ನಾನಕ್ಕೆ ಉತ್ತಮವೆಂದು ತಿಳಿಯಲಾಗುತ್ತದೆ. ನಾರದ ಪುರಾಣಕ್ಕನುಸಾರ, ಮಾಘ ಮಾಸದಲ್ಲಿ ಬ್ರಾಹ್ಮಿಮುಹೂರ್ತದಲ್ಲಿ ಅಂದರೆ ನಸುಕಿನ ೩.೩೦ ರಿಂದ ೪ ರ ವರೆಗೆ ಸ್ನಾನ ಮಾಡುವುದರಿಂದ ಎಲ್ಲ ಮಹಾಪಾಪಗಳು ದೂರವಾಗುತ್ತವೆ ಮತ್ತು ಪ್ರಾಜಾಪತ್ಯ ಯಜ್ಞದ ಫಲ ಪ್ರಾಪ್ತವಾಗುತ್ತದೆ.

ಮಾಘ ಮಾಸದ ನಂತರ ಸೂರ್ಯನಿಗೆ ಅರ್ಘ್ಯ ನೀಡುವ ಮಹತ್ವ

ಮಾಘ ಸ್ನಾನದ ನಂತರ ಸೂರ್ಯದೇವರಿಗೆ ಅರ್ಘ್ಯವನ್ನು ನೀಡುವುದಕ್ಕೆ ಅಸಾಧಾರಣ ಮಹತ್ವವಿದೆ. ಸೂರ್ಯಮಂತ್ರ

ಭಾಸ್ಕರಾಯ ವಿದ್ಮಹೆ | ಮಹದ್‌ದ್ಯುತಿಕರಾಯ ಧೀಮಹಿ |

ತನ್ನೋ ಆದಿತ್ಯ ಪ್ರಚೋದಯಾತ ||

ಅರ್ಥ: ತೇಜದ ಆಗರವಾಗಿರುವ ಸೂರ್ಯನನ್ನು ನಾವು ತಿಳಿದಿದ್ದೇವೆ. ಅತ್ಯಂತ ತೇಜಸ್ವಿ ಮತ್ತು ಎಲ್ಲವನ್ನೂ ಪ್ರಕಾಶಮಯಗೊಳಿಸುವ ಸೂರ್ಯನನ್ನು ನಾವು ಧ್ಯಾನಿಸುತ್ತೇವೆ. ಆ ಆದಿತ್ಯನು ನಮ್ಮ ಬುದ್ಧಿಗೆ ಸತ್ಪ್ರೇರಣೆಯನ್ನು ನೀಡಲಿ.