ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪,
೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ,
ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ.
ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು
ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ
ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್
ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು.
ರಾಮಕೃಷ್ಣರ ಒಡನಾಟ
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ.
ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎಕ್ಸಕರ್ಶನ್" ಎಂಬ ಕವಿತೆಯಲ್ಲಿನ
"ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ
ಭೇಟಿ ನೀಡಿ ಎಂದು ಸಲಹೆ ಇತ್ತರು. ೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ.(ಲಲಿತಕಲೆ) ಪರೀಕ್ಷೆ ಬರೆಯಲು
ತಯಾರಿ ನಡೆಸುತ್ತಿದ್ದಾಗ, ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು. ರಾಮಕೃಷ್ಣರು ನರೆಂದ್ರನನ್ನು
ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ
ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ
ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ
ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ
ಭೇಟಿ ನೀಡಲು ಪ್ರೇರೇಪಿಸಿತು.
ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ
ಬರಿ ಭ್ರಮೆ ಎಂದು ಭಾವಿಸಿದ್ದರು. ನರೇಂದ್ರ ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ
ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಕೊನೆಗೆ ಅವರು
ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ನರೇಂದ್ರರು ತಮ್ಮ
ಆಧ್ಯಾತ್ಮಿಕ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು
ಅನುಭವಿಸಿದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು.
ರಾಮಕೃಷ್ಣ ಮಠದ ಸ್ಥಾಪನೆ
ರಾಮಕೃಷ್ಣರ ಮರಣಾ ನಂತರ ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ,
ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ
ತುಂಬುತಿದ್ದರು. ಈ ಮನೆಯೇ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು.
ವಿವೇಕಾನಂದರ ಭಾರತ ಪರ್ಯಟನೆ
೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ
ಅವರ ಜೊತೆಗೆ ಕಮಂಡಲು, ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ "ದಿ ಇಮಿಟೇಷನ್ ಆಫ್ ಕ್ರೈಸ್ಟ್" ಎಂಬೆರಡು ಪುಸ್ತಕಗಳನ್ನು ತಮ್ಮ
ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
ಅದ್ವೈತ ಸಿದ್ಧಾಂತದ ಉಪಯುಕ್ತತೆ
ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ತತ್ತ್ವಜ್ಞಾನ ಮಾತ್ರವಲ್ಲದೆ
ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ರಾಮಕೃಷ್ಣರಿಂದ ಅವರು
ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಅವರ ಅಂತಿಮವಾದ ತೀರ್ಮಾನವೆಂದರೆ
ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ
ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ
ಮಾಡುವ ಸದೃಢ ನಿಶ್ಚಯ.
ವಿವೇಕಾನಂದರ ವಿಶ್ವಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ
ಪ್ರಚಾರ ಮಾಡಿದರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ
ಹಿಡಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು. ವಿವೇಕಾನಂದರ ನಂಬಿಕೆಗಳಲ್ಲಿ
ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ಪಾಶ್ಚಾತ್ಯ
ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್'
ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು
ಮಾಡಿದರು.
'ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ
ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು.
ಸ್ವದೇಶ ಮಂತ್ರ
ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ,
ಸಾವಿತ್ರಿ, ದಮಯಂತಿಯರು. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ.
ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು.
ಭಾರತದ ಶುಭವೆ ನಮ್ಮ ಶುಭ. ಎಲ್ಲಾ ಧರ್ಮಗಳಿಗಿಂತ ಮೂಲ ಧರ್ಮ ನಮ್ಮ ಧರ್ಮ ಎಂದು ಹೇಳಿದರು.