ರಾಮಕೃಷ್ಣ ಪರಮಹಂಸ ಜಯಂತಿ

ಶ್ರೀ ರಾಮಕೃಷ್ಣ ಪರಮಹಂಸ ಭಾರತದ ಪ್ರಸಿದ್ಧ ಧಾರ್ಮಿಕ ನೇತಾರರಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರುಅದ್ವೈತ ಸಿದ್ಧಾಂತ’ವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು.  ಇವರ ಸ್ಮರಣಾರ್ಥ ದಿನ ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ ಆಚರಿಸಲಾಗುತ್ತದೆ. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.

ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.

ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ ಎಲ್ಲ ಅಸ್ತಿತ್ವದ ಏಕತೆ, ಮಾನವರಲ್ಲಿಯೂ ಇರುವ ದೈವತ್ವ, ದೇವರ ಏಕತೆ  ಹಾಗೂ  ಎಲ್ಲ ಧರ್ಮಗಳ ಸಾಮರಸ್ಯ.

ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೇ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು. ಪರಮಹಂಸರು ದಾಸ್ಯಭಾವವನ್ನು ಅಭ್ಯಾಸ ಮಾಡಿದರು. ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು.

ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯವಿದ್ದು ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಅದ್ಭುತ ಸಾಧನೆ ಮಾಡಿದುದು, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಹಾಗೂ ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿಯೇ. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು. ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು.

ಕಾಮಿನಿ-ಕಾಂಚನ ತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು.

ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅವರ ತಪಸ್ಸು ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು.

ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು.