ಬಕ್ರೀದ್

ಬಕ್ರೀದ್ ತ್ಯಾಗ ಬಲಿದಾನದ ಸಂಕೇತವಾಗಿರುವ ಆಚರಣೆ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ಹಬ್ಬಕ್ಕೆ ಈದ್ ಉಲ್ ಅಧಾ ಎಂಬ ಹೆಸರೂ ಇದೆ.

ಮುಸ್ಲಿಮರಿಗೆ ಒಟ್ಟು ಐದು ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯಗಳಿವೆ.

1. ಶಹಾದ (ಏಕದೇವನಲ್ಲಿ ನಂಬಿಕೆ) 

2. ನಮಾಜ್ (ನಿತ್ಯವೂ ಐದು ಹೊತ್ತಿನ ಪ್ರಾರ್ಥನೆ)

3. ರೋಜಾ (ರಂಜಾನ್ ಮಾಸದ ಮೂವತ್ತು ದಿನ ಉಪವಾಸ)

4. ಜಕಾತ್ (ಕಡ್ಡಾಯ ದಾನ)

5. ಹಜ್ (ಉಳ್ಳವರು ಜೀವನದಲ್ಲಿ ಕನಿಷ್ಠ ಒಂದು ಬಾರಿ ನಿರ್ವಹಿಸಬೇಕಾದ ಹಜ್ ಯಾತ್ರೆ).

ಇವುಗಳಲ್ಲಿ ಪ್ರಥಮ ಮೂರು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ನಾಲ್ಕನೆಯದು ಆಯಾ ವ್ಯಕ್ತಿಯ ಆರ್ಥಿಕ ಸಾಮರ್ಥ್ಯವನ್ನು ಅನುಸರಿಸಿದೆ. ಐದನೆಯದು ಹಜ್ ಯಾತ್ರೆ ಹಲವು ನಿಯಮಗಳ ನಿಬಂಧನೆಗೆ ಒಳ ಪಟ್ಟಿದೆ.

ನಿಮಗೆ ಅಮೂಲ್ಯ ಎನಿಸಿದ್ದನ್ನು ತ್ಯಾಗ ಮಾಡುವಂತಿರಬೇಕು ಎಂಬುದೇ ಬಕ್ರೀದ್ ಹಬ್ಬದ ಮುಖ್ಯ ಸಾರ ಈ ಹಬ್ಬದ ಮುಖ್ಯವಾದ ಅಂಶವೆಂದರೆ ಸುಮಾರು ಸಾವಿರದ ನಾನೂರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ತಮಗೆ ಅತ್ಯಂತ ಪ್ರೀತಿ ಪಾತ್ರರಾದ ಮಗ ಇಸ್ಮಾಯೀಲ್ ರನ್ನೂ ದೇವರ ಇಚ್ಚೆಯಂತೆ ತ್ಯಾಗ ಮಾಡುತ್ತಾರೆ. ಪ್ರವಾದಿಯವರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಕುರಿಯೊಂದನ್ನು ಬಲಿಪಡೆದುಕೊಳ್ಳುತ್ತಾರೆ. ಅರಬಿ ಭಾಷೆಯಲ್ಲಿ ಬಕ್ರ್ ಎಂದರೆ ಕುರಿ, ಈದ್ ಅಂದರೆ ಹಬ್ಬ. ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದೇ ಬಕ್ರೀದ್ ಆಗಿದೆ.

ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದೇ ಈ ಹಬ್ಬದ ಸೂಚನೆಯಾಗಿದೆ. ಇದನ್ನೇ ತ್ಯಾಗ ಅಥವಾ ಕುರ್ಬಾನಿ ಎಂದು ಕರೆಯಲಾಗುತ್ತದೆ. ಬಕ್ರೀದ್ ಹಬ್ಬ ಒಟ್ಟು ಮೂರು ದಿನಗಳಾಗಿ ಆಚರಿಸಲಾಗುತ್ತದೆ. ಮೊದಲ ದಿನ ಅರಫಾತ್ (ಉಪವಾಸ) ಎರಡನೆಯ ದಿನ ಈದ್ (ಹಬ್ಬದ ದಿನ) ಮತ್ತು ಮೂರನೆಯ ದಿನ (ಜಮಾರತ್) ಅಥವಾ ಸೈತಾನನಿಗೆ ಕಲ್ಲು ಹೊಡೆಯುವ ದಿನ. ಮಕ್ಕಾದಲ್ಲಿ ಹಜ್ ಯಾತ್ರಿಕರಿಗೆ ಮುಂದಿನ ಮೂರು ದಿನಗಳು ಪವಿತ್ರವಾಗಿವೆ.

ಆದರೆ ಉಳಿದವರಿಗೆ ಮೂರು ದಿನಗಳಿಗೆ ಹಬ್ಬ ಸೀಮಿತವಾಗಿದೆ. ಸೈತಾನನಿಗೆ ಕಲ್ಲು ಹೊಡೆಯುವುದು ಕೇವಲ ಸಾಂಕೇತಿಕವಾಗಿದ್ದು ನಮ್ಮ ಮನದೊಳಗಣ ಸೈತಾನನನ್ನು ಕೊಲ್ಲುವುದೇ ಇದರ ನಿಜವಾದ ಅರ್ಥವಾಗಿದೆ. ಈ ಮೂರೂ ದಿನಗಳಲ್ಲಿ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ದೇವರಲ್ಲಿ ಬೇಡಿಕೊಂಡ ಯಾವುದೇ ಪ್ರಾರ್ಥನೆ ಈಡೇರುತ್ತದೆ ಎಂಬ ನಂಬಿಕೆ ಇದೆ.



ಡಾ.ಬಿ.ಆರ್.ಅಂಬೇಡ್ಕರ್

ಭಾರತದ ಸಂವಿಧಾನದ ಶಿಲ್ಪಿ ಎಂದು ಕರೆಸಿ ಕೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಸಮಾನತೆ ಮತ್ತು ಅಸ್ಪಶ್ಯತಾ ನಿವಾರಣೆಗೆ ಹೋರಾಡಿದ ಮಹಾ ನಾಯಕರು. ಅವರು 1891 ಏಪ್ರಿಲ್ 14ರಂದು ಮಧ್ಯ ಪ್ರದೇಶದ ಮಾಹೋ ಎನ್ನುವ ಪ್ರದೇಶದಲ್ಲಿ ಜನಿಸಿದರು. ಅವರ ಹಿರಿಯರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೋಕಿನ ಅಂಬೆವಾಡ ಗ್ರಾಮದವರು. ಅವರ ತಾತ ಮಾಲೋಜಿ ಸಕ್ಪಾಲ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹವಾಲ್ದಾರರಾಗಿ ನಿವೃತ್ತರಾಗಿದ್ದರು. ಕಾಲಕ್ಕೆ 19 ಮೆಡಲ್ಗಳನ್ನು ಪಡೆದಿದ್ದರು. ಅಂಬೇಡ್ಕರ್ ಅವರ ತಂದೆ ರಾಮ್ಜಿ ಸಕ್ಪಾಲ್ ಮತ್ತು ತಾಯಿ ಭೀಮಾಬಾಯಿ. ದಂಪತಿಗಳ ಹದಿನಾಲ್ಕನೇ ಮತ್ತು ಕೊನೆಯ ಮಗನೇ ಅಂಬೇಡ್ಕರ್. ಅವರ ನಿಜವಾದ ಹೆಸರು ಭೀಮರಾವ್ ಸಕ್ಬಾಲ್.

ಬಾಲ್ಯ ಮತ್ತು ಅಧ್ಯಯನ

ಬಾಲ್ಯದಿಂದಲೇ ಅಸ್ಪಶ್ಯತೆಯ ಅನುಭವ ಪಡೆದ ಅವರಿಗೆ ಗುರುಗಳಾದ ಫೆಂಡಸೆ ಅಂಬೇಡ್ಕರ್ ಬೆಳಕಾದರು. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದೂ ಅಲ್ಲದೆ ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಅನ್ನು ಸೇರಿಸಿ ಆತ್ಮ ವಿಶ್ವಾಸ ತುಂಬಿಸಿದರು. ಕಹಿ ಅನುಭವಗಳ ನಡುವೆಯೇ ಉತ್ತಮ ದರ್ಜೆಯಲ್ಲಿ ಅಂಬೇಡ್ಕರ್ ಹತ್ತನೇ ತರಗತಿ ಮುಗಿಸಿದರು. ಆಗಲೇ ರಮಾಬಾಯಿಯವರೊಡನೆ ಅವರ ವಿವಾಹ ಕೂಡ ಜರುಗಿತು. ಬರೋಡದ ಸಯ್ಯಾಜಿ ರಾವ್ ಗಾಯಕವಾಡರ ಪ್ರೋತ್ಸಾಹದಿಂದ ಬಿ. ಮುಗಿಸಿ ಅವರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆದರು. ಅವರ ನೆರವಿನಿಂದ ವಿದೇಶಕ್ಕೆ ಹೋಗುವ ಅವಕಾಶವೂ ಸಿಕ್ಕಿತು. ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂಎ ಪದವಿ ನಂತರ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನಗಳು ಎನ್ನುವ ವಿಷಯದಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ ಎನ್ನುವ ವಿಷಯದಲ್ಲಿ ಎಂ.ಎಸ್.ಸಿ ಪದವಿ ಪಡೆದ ಅಂಬೇಡ್ಕರ್ ಜರ್ಮನಿ ಬಾನ್ ವಿಶ್ವವಿದ್ಯಾಲಯದಲ್ಲಿ ಕೂಡ ಅಧ್ಯಯನ ನಡೆಸಿದರು.

ವೃತ್ತಿ

ಹಣಕಾಸಿನ ಸಮಸ್ಯೆಯಿಂದ ಭಾರತಕ್ಕೆ ಹಿಂದಿರುಗಿದ ನಂತರ ವಕೀಲರಾಗಿ ವೃತ್ತಿಯನ್ನು ಆರಂಭಿಸಿ ಕೆಲಕಾಲ ತೆರಿಗೆ ಸಲಹೆಗಾರರಾಗಿ ಕೂಡ ಸೇವೆ ಸಲ್ಲಿಸಿದರು. ಕಾಲದಲ್ಲಿಯೇ ಅವರ ಬದುಕು ಸಾಮಾಜಿಕ ಹೋರಾಟದ ಕಡೆ ಹೊರಳಿತು. ದಲಿತರಿಗೆ ಮೀಸಲಾಗಿ ಕುರಿತಾಗಿ ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾದರು. 1935ರಲ್ಲಿ ಅವರು ಸ್ಥಾಪಿಸಿದ ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ 17 ಅಭ್ಯರ್ಥಿಗಳ ಪೈಕಿ 15 ಜನ ವಿಜಯ ಸಾಧಿಸುತ್ತಾರೆ. 1946ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತದಿಂದ ಆಯ್ಕೆಯಾಗಿ ಮುಂದೆ 1947ರಲ್ಲಿ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕ ಹೊಂದಿ, ಸತತವಾಗಿ ಮೂರು ವರ್ಷಗಳವರೆಗೆ ಹಗಲು ರಾತ್ರಿ ಸಂವಿಧಾನ ಬರೆದು 1950ರಲ್ಲಿ ಮುಗಿಸುತ್ತಾರೆ. ಅದಕ್ಕಾಗಿ ಇವರನ್ನು ಸಂವಿಧಾನದ ಶಿಲ್ಪಿ ಎಂದು ಪರಿಗಣಿಸಲಾಗಿದೆ.

ಮಾರ್ಗದರ್ಶಿ

1947ರಲ್ಲಿ ಕಾನೂನು ಮಂತ್ರಿಯಾಗಿ ಪಂಡಿತ ಜವಹಾರಲಾಲ್ ನೆಹರೂ ಮಂತ್ರಿ ಮಂಡಲದಲ್ಲಿ ಸಚಿವರಾದರು. ನೆಹರೂಜಿ ಹಾಕಿಕೊಂಡ ಪಂಚ ವಾರ್ಷಿಕ ಯೋಜನೆಗೆ ಅಂಬೇಡ್ಕರರವರು ಮಾರ್ಗದರ್ಶಿಗಳಾಗಿದ್ದರು. ಮತ್ತು ಭಾಕ್ರಾನಂಗಲ್ ಅಣೆಕಟ್ಟು ಕಟ್ಟಲು ಸಲಹೆ ನೀಡಿದವರೆ ಅಂಬೇಡ್ಕರ್. ಅಂಬೇಡ್ಕರ್ ಅವರು ಭಾರತದ ನೀರಾವರಿ ಯೋಜನೆಯ ಜನಕನಾಗಿದ್ದು.ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ 1952 ರಲ್ಲಿ ಸಲಹೆ ನೀಡಿದರು. ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಇವರು ಡಾ ಅಂಬೇಡ್ಕರ್, ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದಾರೆ,ಎಂದು ಪರಿಚಯಿಸುತ್ತಿದ್ದರು. ಹಿಂದೂ ಕೋಡ್ ಬಿಲ್ ಪಾಸಾಗದ ಕಾರಣ ಅಂಬೇಡ್ಕರ್ ರವರು ಕಾನೂನು ಮ್ಯಾಟ್ರಿ ಪದವಿಗೆ ರಾಜೀನಾಮೆ ನೀಡಿದರು. 1950 ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಭಾರತ ಸಂವಿಧಾನ ರಚಿಸಿದ್ದಕ್ಕಾಗಿ ಇವರನ್ನು ಸಂವಿಧಾನ ಶಿಲ್ಪಿ ,ಆಧುನಿಕ ಭಾರದ ನಿರ್ಮಾಪಕ, ಸಮಾಜದ ಪ್ರವರ್ತಕ, ಎಂದು ಪರಿಗಣಿಸಿ, ಡಾಕ್ಟರ್ ಆಫ್ ಲಾ ಪದವಿ ನೀಡಿತು.

1953ರಲ್ಲಿ ಆಂಧ್ರಪ್ರದೇಹದ ಉಸ್ಮಾನಿಯ ವಿಶ್ವವಿದ್ಯಾಲಯ ಸಂವಿಧಾನದ ಸೇವೆಯನ್ನು ಪರಿಗಣಿಸಿ ಡಾಕ್ಟರ್ ಆಫ್ ಲಿಟರೇಚರ್ ಎಂಬ ಗೌರವ ಪದವಿಯನ್ನು ನೀಡಿತು. 1951ರಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಸಕ್ರಿಯ ರಾಜಕೀಯದಿಂದ ದೂರ ಉಳಿದು ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮದ ಆಚಾರ ಮತ್ತು ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು. ಮುಂದೆ ಡಿಸೆಂಬರ್ 6 1956ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.