ಇಂದು ಕಾರ್ತೀಕ ಶುದ್ಧ ಸಪ್ತಮಿ. ಈ ದಿನವನ್ನು ಮಹರ್ಷಿ ಯಾಜ್ಞವಲ್ಕ್ಯರ ಜಯಂತಿ ಎಂದು ಆಚರಿಸುತ್ತಾರೆ. ಭಾರತೀಯ ಸನಾತನ ಸಂಸ್ಕೃತಿಗೆ ಆಧ್ಯಾತ್ಮಿಕ ಕೊಡುಗೆ ನೀಡಿದ ಅತಿ ಶ್ರೇಷ್ಠ ಋಷಿಗಳಲ್ಲಿ ಮಹರ್ಷಿ ಯಜ್ಞವಲ್ಕ್ಯರು ಪ್ರಾತಃಸ್ಮರಣೀಯರು.
1. ಮಹರ್ಷಿ ಯಾಜ್ಞವಲ್ಕ್ಯರ ಜೀವನ ಪರಿಚಯ .
ಪಾಂಚಾಲ ದೇಶದ ವೇದ ನಿಷ್ಟರಾದ ದೇವರಾತ ಹಾಗು ಸುನಂದಾದೇವಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಕೇದಾರೇಶ್ವರನನ್ನು ಮಾಡಿದ ತಪಸ್ಸಿನ ಫಲವಾಗಿ ಮಹರ್ಷಿ ಯಾಜ್ಞವಲ್ಕ್ಯರು ಜನಿಸಿದರು. ದೇವರಾತರ ವಂಶವು ಸದಾ ಕಾಲ ಯಜ್ಞಕಾರ್ಯದಲ್ಲಿ ನಿರತರಾಗಿದ್ದವರು. ಹೀಗಾಗಿ ಹುಟ್ಟಿದ ಮಗುವಿಗೆ 'ಯಾಜ್ಞವಲ್ಕ್ಯ' ಎಂದು ನಾಮಕರಣ ಮಾಡಿದರು.
ಬಾಲಕರಾಗಿದ್ದಾಗ ತಂದೆ ದೇವರಾತರಿಂದ ಪ್ರಾರಂಭಿಕ ವೈದಿಕ ವಿದ್ಯೆಗಳನ್ನು ಕಲಿತರು. ಬೆಳೆಯುವ ಪೈರನ್ನು ಮೊಳಕೆಯಲ್ಲೇ ನೋಡು ಎಂಬಂತೆ, ಬಾಲ್ಯದಲ್ಲೇ ಯಾಜ್ಞವಲ್ಕ್ಯರು ಮಂತ್ರಾರ್ಥದಲ್ಲಿ, ಯಜ್ಞ ಅನುಷ್ಠಾನದಲ್ಲಿ ಅತೀವ ಆಸಕ್ತಿ ಹಾಗು ಉತ್ಸಾಹವನ್ನು ತೋರುತ್ತಿದ್ದರು. ಬಾಲಕನ ಅತ್ಯಂತ ಚುರುಕು ಬುದ್ದಿ, ತೀಕ್ಷ್ಣ ಸ್ಮರಣ ಶಕ್ತಿಯನ್ನು ನೋಡಿ ತಂದೆತಾಯಿಗಳು, ಹಿರಿಯರು ಆಶ್ಚರ್ಯ ಗೊಂಡಿದ್ದರು. ಯಾಜ್ಞವಲ್ಕ್ಯರು ಬಾಲ್ಯದಲ್ಲಿ ನಚಿಕೇತನ ಕಥೆಯನ್ನು ಕೇಳಿ, ಅವನಂತೆಯೇ ತಾನು ಸಹ ಆಗಬೇಕೆಂದು ಪ್ರಭಾವಿತರಾಗಿದ್ದರು.
ಮುಂದೆ ಉಪನಯನ ವಾದಮೇಲೆ ಗುರುಕುಲದಲ್ಲಿ ವೇದ ವಿದ್ಯಾಧ್ಯಯನವನ್ನು ಮುಂದುವೆರೆಸಿದರು. ಅವರು ಭಾಸ್ಕಲರಲ್ಲಿ ಋಗ್ವೇದವನ್ನು, ಜೈಮಿನಿ ಋಷಿಗಳಲ್ಲಿ ಸಾಮವೇದವನ್ನು, ಆರುಣೀ ಋಷಿಗಳಲ್ಲಿ ಅಥರ್ವವೇದವನ್ನು ಅಧ್ಯಯನ ಮಾಡಿದ ನಂತರ ಯಜುರ್ವೇದವನ್ನು ಕಲಿಯಲು ಅವರ ಸೋದರ ಮಾವ ವೈಶಂಪಾಯನರ ಗುರುಕುಲವನ್ನು ಸೇರಿದರು.
ಮುಂದೆ ಯವುದೋ ಒಂದು ಕಾರಣಕ್ಕೆ ವೈಶಂಪಾಯನರಿಗೂ ಯಾಜ್ಞವಲ್ಕ್ಯರಿಗೂ ಮನಸ್ತಾಪ ಉಂಟಾಗಿ, ಕುಪಿತಗೊಂಡ ವೈಶಂಪಾಯನರು ಯಾಜ್ಞವಲ್ಕ್ಯರಿಗೆ ಅವರಿಂದ ಕಲಿತ ವೇದ ವಿದ್ಯೆಯನ್ನು ಹಿಂತಿರುಗಿಸಿ ಆಶ್ರಮವನ್ನು ಬಿಡಬೇಕೆಂದು ಆಜ್ಞಾಪಿಸುತ್ತಾರೆ. ಕೂಡಲೇ ಗುರುವಿನ ಅಣತಿಯಂತೆ ಕಲಿತ ಯಜುರ್ವೇದವನ್ನು ಹಿಂತಿರಿಗಿಸಿ ಆಶ್ರಮವನ್ನು ಬಿಟ್ಟು ಹೊರಡುತ್ತಾರೆ.
ವೈಶಂಪಾಯನರ ಗುರುಕುಲದಿಂದ ಹೊರಟ ಯಾಜ್ಞವಲ್ಕ್ಯರು, ಯಜುರ್ವೇದದ ಜ್ಞಾನವಿಲ್ಲದೆ ಪಾರಮಾರ್ಥ ಜ್ಞಾನ ಅಪೂರ್ಣವಾದದು ಎಂದು ಅರಿತು, ಗಂಗಾತೀರದಲ್ಲಿ ವೇದ ಮಾತೆಯಾದ ಗಾಯಿತ್ರಿದೇವಿಯನ್ನು ಆರಾಧಿಸುತ್ತಾರೆ. ಆಕೆಯು ನೀಡಿದ ಆದೇಶದಂತೆ ಭಗವಾನ್ ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆಂದೂ, ಸೂರ್ಯನು ಕುದುರೆಯ ರೂಪದಲ್ಲಿ ಬಂದು ತನ್ನ ತೇಜಸ್ಸನ್ನು ಯಾಜ್ಞವಲ್ಕ್ಯರ ದೇಹವನ್ನು ಪ್ರವೇಶಿಸುವ ಮೂಲಕ ಯಜುರ್ವೇದದ ಜ್ಞಾನವನ್ನು ಅನುಗ್ರಹಿಸಿದನೆಂದು ಹೇಳುತ್ತಾರೆ. ಸೂರ್ಯನಿಂದ ಪಡೆದ ಈ ವೇದವು ಶುದ್ದವೂ, ಸ್ಪಷ್ಟವೂ ಆಗಿರುತ್ತ್ತದೆ. ಅಂದರೆ ಮಂತ್ರ ಬ್ರಾಹ್ಮಣ ಮಿಶ್ರಗಳಿಲ್ಲದ ಕೇವಲ ಮಂತ್ರಗಳಿರುವ ವೇದಗಳು. ಸೂರ್ಯನು ಬೆಳಕಿನ ಹಾಗು ಜ್ಞಾನದ ಸಂಕೇತ. ಆದಕಾರಣ ಸೂರ್ಯನಿಂದ ಪಡೆದ ಯಜುರ್ವೇದವನ್ನು ಶುಕ್ಲ ಯಜುರ್ವೇದವೆನ್ನುತ್ತಾರೆ. ಅಲ್ಲದೆ ಇದು ಕುದುರೆಯ ಮೂಲಕ ಉಪದೇಶಿಸಲ್ಪಟ್ಟಿರುವುರಿಂದ ವಾಜಸನೇಯ ಸಂಹಿತೆ ಎಂದೂ ಪ್ರಸಿದ್ಧವಾಗಿದೆ.
ಸಕಲ ವೇದ ಪಾರಂಗತರಾದ ಯಾಜ್ಞವಲ್ಕ್ಯರು ಗೋದಾವರೀ ತೀರದಲ್ಲಿ ಗುರುಕುಲವನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾನ ಮಾಡಿ ಕುಲಪತಿಗಳಾದರು.
ಯಾಜ್ಞವಲ್ಕ್ಯರಿಂದ ಶುಕ್ಲಯಜುರ್ವೇದವನ್ನು ಕಲಿತ ಶಿಷ್ಯರಲ್ಲಿ ಕಾಣ್ವರು ಮತ್ತು ಮಾಧ್ಯಂದಿನರು ಪ್ರಮುಖರು. ಇವರಲ್ಲಿ ಕಾಣ್ವರು ಪ್ರಥಮ ಶಿಷ್ಯರು. ಇವರು ದಕ್ಷಿಣ ಭಾರತದಲ್ಲಿ ಶುಕ್ಲಯಜುರ್ವೇದವನ್ನು ಪ್ರಚಾರ ಮಾಡಿದರು. ಈ ಋಷಿಯ ಅನುಯಾಯಿಗಳು ಇಂದಿಗೂ ಸಹ ನಮ್ಮ ಕರ್ನಾಟಕದಲ್ಲಿ ಸಹಸ್ರಾರು ಮಂದಿ ಇರುತ್ತಾರೆ. ಅವರನ್ನು ಕಾಣ್ವ ಶಾಖೆಯವರು ಅಥವಾ ಶುಕ್ಲ ಯಜುರ್ವೇದಿಗಳು ಎಂದು ಕರೆಯುತ್ತಾರೆ. ಮಾಧ್ಯಂದಿನರು ಉತ್ತರ ಭಾರತದಲ್ಲಿ ಶುಕ್ಲಯಜುರ್ವೇದವನ್ನು ಪ್ರಚಾರ ಮಾಡುತ್ತಾರೆ. ಹೀಗಾಗಿ ಉತ್ತರ ಭಾರತದಲ್ಲಿ ಮಾಧ್ಯಂದಿನ ಶಾಖೆಯವರು ಹೆಚ್ಚಾಗಿ ಇಂದಿಗೂ ಕಾಣುತ್ತಾರೆ.
ಯಾಜ್ಞವಲ್ಕ್ಯರಿಗೆ ಇಬ್ಬರು ಪತ್ನಿಯರು. ಹಿರಿಯ ಪತ್ನಿ ಹೆಸರು ಕಾತ್ಯಾಯಿನಿ. ಈಕೆ ಕತ ಮಹರ್ಷಿಯ ಮಗಳು. ಕಿರಿಯ ಪತ್ನಿ ಮೈತ್ರೇಯಿ. ಈಕೆ ಮಿತ್ರಾ ಋಷಿಗಳ ಮಗಳು. ಹಿರಿಯ ಪತ್ನಿ ಕಾತ್ಯಾಯಿನಿ ಆಶ್ರಮದ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಂಡು ಯಾಜ್ಞವಲ್ಕ್ಯರ ಆಧ್ಯಾತ್ಮ ಸಾಧನೆಗೆ ಎಲ್ಲ ರೀತಿಯಲ್ಲೂ ಸಹಕರಿಸಿದವಳಾಗಿದ್ದರೆ, ಕಿರಿಯ ಪತ್ನಿ ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಿ ತೋರದೆ, ಯಾಜ್ಞವಲ್ಕ್ಯರಿಂದ ಆಧ್ಯಾತ್ಮ ತತ್ವದರ್ಶನವನ್ನೇ ಪಡೆಯುವಲ್ಲಿ ಯಶಸ್ವಿಯಾಗಿದ್ದಳು.
ಒಮ್ಮೆ ಮಿಥಿಲೆಯ ರಾಜ ಜನಕ ಮಹಾರಾಜನು ಒಂದು ಬಹುದಕ್ಷಿಣಾ ಯಾಗ ಎಂಬ ಜ್ಞಾನ ಯಜ್ಞವನ್ನು ಏರ್ಪಡಿಸುತ್ತಾನೆ. ಅದು ಒಂದು ವಿದ್ವತ್ ಸಭೆ. ಆ ಸಭೆಗೆ ಭಾರತದ ಎಲ್ಲಾ ಕಡೆಗಳಿಂದ ವೇದ ವಿದ್ವಾಂಸರುಗಳು, ಪಂಡಿತರುಗಳು, ಮುನಿಗಳು, ಋಷಿಗಳು, ಆಗಮಿಸಿದ್ದರು. ಆ ಸಭೆಗೆ ಬಂದಿದ್ದವರಲ್ಲಿ ಯಾರು ನಿಜವಾದ ಬ್ರಹ್ಮಿಷ್ಠರೊ ಅವರಿಗೆ ಸಹಸ್ರ ಗೋವುಗಳನ್ನು ಜೊತೆಗೆ ಸುವರ್ಣ ದಕ್ಷಿಣೆಗಳನ್ನು ಕೊಡುವುದಾಗಿ ಜನಕ ಮಹಾರಾಜನು ತುಂಬಿದ ಸಭೆಯಲ್ಲಿ ಘೋಷಿಸುತ್ತಾನೆ. ಅಲ್ಲಿಗೆ ಬಂದಿದ್ದ ಕೆಲ ಋಷಿಗಳಲ್ಲಿ ತಾವೇ ಬ್ರಹ್ಮಿಷ್ಠರೆಂಬ ಭ್ರಮೆಯಲ್ಲಿ ಇದ್ದವರಾಗಿದ್ದರೂ ನಿಶ್ಚಲವಾದ ಆತ್ಮ ವಿಶ್ವಾಸವಿಲ್ಲದೆ ಆಸೀನರಾಗೇ ಇದ್ದರು.
ಆ ಸಮಯದಲ್ಲಿ ಮಹರ್ಷಿ ಯಾಜ್ಞವಲ್ಕ್ಯರು ಮೌನ ಮುರಿದು ತಮ್ಮ ಶಿಷ್ಯರಿಗೆ ಗೋವುಗಳನ್ನು ಆಶ್ರಮಕ್ಕೆ ಹೊಡೆದುಕೊಂಡು ಹೋಗಲು ಹೇಳುತ್ತಾರೆ. ಇದರಿಂದ ಕುಪಿತರಾದ ಅಶ್ವಾ, ಆರ್ತಭಾಗ, ಜರತ್ಕಾರವ ಇತ್ಯಾದಿ ಋಷಿಗಳು ಆಕ್ಷೇಪವೆತ್ತಿ ಯಾಜ್ಞವಲ್ಕ್ಯರ ಬ್ರಹ್ಮಜ್ಞಾನದ ಬಗ್ಗೆ ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಾರೆ. ಪ್ರಶ್ನೆ ಮಾಡಿದವರಲ್ಲಿ ಗಾರ್ಗಿ, ವಾಚಕ್ನವಿ ಮೊದಲಾದ ಸ್ತ್ರೀಯರು ಸಹ ಇದ್ದರು. ಬಹು ದೀರ್ಘವಾದ ಚರ್ಚೆಗಳು, ವಾದ ವಿವಾದಗಳು ನಡೆಯುತ್ತದೆ. ಮಹರ್ಷಿ ಯಾಜ್ಞವಲ್ಕ್ಯರು ಎಲ್ಲರ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರವನ್ನು ಕೊಟ್ಟು ಸಭೆಯಲ್ಲಿ ಮಹರ್ಷಿ ಯಜ್ಞವಲ್ಯರೇ ಸರ್ವ ಶ್ರೇಷ್ಠ ಬ್ರಹ್ಮಜ್ಞಾನಿ ಎಂದು ಒಮ್ಮತದ ತೀರ್ಮಾನವಾಗುತ್ತದೆ. ಇದರಿಂದ ಸಂತಸಗೊಂಡ ಜನಕ ಮಹಾರಾಜನು ಮಹರ್ಷಿ ಯಜ್ಞವಲ್ಕ್ಯರನ್ನು ತನ್ನ ರಾಜಗುರುವಾಗಿ ಸ್ವೀಕರಿಸುತ್ತಾನೆ.
ಹೀಗೆ ದಿವ್ಯ ಜೀವನವನ್ನು ನಡೆಸಿದ ಮಹರ್ಷಿ ಯಾಜ್ಞವಲ್ಕ್ಯರು ಎಲ್ಲರಿಂದಲೂ ಗೌರವ ಅದರಗಳಿಗೆ ಪಾತ್ರರಾದರು. ವೇದ ವಿದ್ಯೆಯನ್ನು ಸಹಸ್ರಾರು ವಿದ್ಯಾರ್ಥಿಗಳಿಗೆ ಉಪದೇಶಿಸಿರುತ್ತಾರೆ. ವೇದ ಜ್ಞಾನವನ್ನು ಅರಸಿ ಬಂದವರಿಗೆ ಕಲ್ಪವೃಕ್ಷ ವಾಗಿದ್ದರು ಕ್ರಮೇಣ ಮಹರ್ಷಿ ಯಾಜ್ಞವಲ್ಕ್ಯರಿಗೆ ಲೋಕ ವ್ಯವಹಾರದ ಜೀವನ ಸಾಕು ಎನಿಸಿ, ಹಿಮಾಲಯಕ್ಕೆ ಹೋಗಲು ನಿಶ್ಚಯಿಸುತ್ತಾರೆ. ಆಗ ಇಬ್ಬರು ಪತ್ನಿಯರಿಗೆ ತಮ್ಮ ಸಂಪತ್ತನ್ನೆಲ್ಲಾ ಸಮವಾಗಿ ಹಂಚುತ್ತಾರೆ ಹಿರಿಯ ಪತ್ನಿ ಕಾತ್ಯಾಯಿನಿ ಆಶ್ರಮದ ಶ್ರೀಮಾತೆ ಯಾಗಿ ಉಳಿದರೆ, ಕಿರಿಯ ಪತ್ನಿ ಮೈತ್ರೇಯಿ ತನಗೆ ಯಾವುದೇ ಪ್ರಾಪಂಚಿಕ ಅಸ್ತಿ ಬೇಡ, ಆತ್ಮ ಸಾಕ್ಷಾತ್ಕಾರ ಜ್ಞಾನ ಒಂದೇ ಸಾಕು ಎಂದು ಹಿಮಾಲಯಕ್ಕೆ ಹೊರಟ ಯಾಜ್ಞವಲ್ಕ್ಯರನ್ನು ಹಿಂಬಾಲಿಸುತ್ತಾಳೆ. ಒಂದು ದಿನ ತಪಸ್ಸಿನಲ್ಲಿ ನಿರತರಾಗಿದ್ದ ಮೈತ್ರೇಯಿ ಮುಕ್ತಿಯನ್ನು ಹೊಂದುತ್ತಾಳೆ. ನಂತರ ಕೆಲ ದಿನಗಳಲ್ಲಿ ಮಹರ್ಷಿ ಯಾಜ್ಞವಲ್ಕ್ಯರು ದಿವ್ಯಧ್ಯಾನದ ಮೂಲಕ ಬ್ರಹ್ಮಲೀನರಾಗಿ ಈ ಲೋಕದಿಂದ ಕಣ್ಮರೆಯಾದರು.
2. ಮಹರ್ಷಿ ಯಾಜ್ಞವಲ್ಕ್ಯರು ನೀಡಿರುವ ಜ್ಞಾನ ಸಂಪತ್ತಿನ ಪರಿಚಯ.
ಈಶಾವಾಸ್ಯ ಉಪನಿಷತ್
ಈ ಉಪನಿಷತ್ತಿನ ಮೊದಲನೆಯ ಶ್ಲೋಕವು "ಈಶಾವಾಸ್ಯಮಿದಂ ಸರ್ವಂ" ಎಂದು ಆರಂಭವಾಗುವುದರಿಂದ ಇದನ್ನು “ಈಶಾವಾಸ್ಯ ಉಪನಿಷತ್” ಎಂದು ಕರೆಯುತ್ತಾರೆ. ಇದು ಶುಕ್ಲ ಯಜುಸಂಹಿತೆಯ' 40ನೇ ಅಧ್ಯಾಯದಲ್ಲಿ ಬರುತ್ತದೆ. ಇದು ಕೇವಲ 18 ಶ್ಲೋಕಗಳನ್ನು ಹೊಂದಿರುವ ಅತ್ಯಂತ ಕಿರಿದಾದ ಉಪನಿಷತ್. ಆದರೆ ವೇದಾಂತ ದರ್ಶನದ ಸಾರಸರ್ವಸ್ವವೂ ಈ ಪುಟ್ಟ ಉಪನಿಷತ್ನಲ್ಲಿ ಅಡಕವಾಗಿದೆ. ಭವದ್ಗೀತೆಯ 18 ಅಧ್ಯಾಯಗಳಿಗೆ ಈ ಮಂತ್ರಸಂಖ್ಯೆಯು ಸಂವಾದಿಯಾಗಿ ಇದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜಗತ್ತೆಲ್ಲವೂ ಈಶಮಯ ಹಾಗು .ಪೂರ್ಣ ಎನ್ನುತ್ತದೆ. ಇದರಲ್ಲಿನ ತತ್ವದರ್ಶನದ ಪ್ರಕಾರ ಲೌಕಿಕ ಬೇರೆ ಪಾರಮಾರ್ಥಿಕ ಬೇರೆ ಆಲ್ಲ. ಎರಡು ಒಂದಕ್ಕೊಂದು ಪೂರಕ., ಸಂಸಾರ ಮಾಯೆ ಅಲ್ಲ, ಅದೊಂದು ತಪೋಭೂಮಿ. ಕರ್ಮ ಸಿದ್ಧಿಯನ್ನು ಕಾಣುವದಕ್ಕಾಗಿ ನಿರ್ಮಿತವಾದ ಧರ್ಮಕ್ಷೇತ್ರ,. ಯಾವುದೂ ಅಶಾಶ್ವತವಲ್ಲ ಎಲ್ಲವೂ ಶಾಶ್ವತವೇ, ಯಾವುದೂ ಅಸತ್ಯವಲ್ಲ ಎಲ್ಲವೂ ಸತ್ಯವೇ ಎಂದು ತಿಳಿಸುತ್ತದೆ.
ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗಗಳ ನಿರೂಪಣೆಯು ಈ ಉಪನಿಷತ್ತಿನಲ್ಲಿದೆ. ಇದು ಉತ್ತಮಾಧಿಕಾರಿಗೆ ಜ್ಞಾನನಿಷ್ಠೆಯು, ಮಂದಾಧಿಕಾರಿಗೆ ಕರ್ಮನಿಷ್ಠೆಯು ಹೇಳಲ್ಪಟ್ಟಿದೆ. ಸರ್ವಭೂತಗಳು ಆತ್ಮವೇ, ಆತ್ಮತತ್ವವನ್ನು ತಿಳಿದವನಿಗೆ ಶೋಕ ಮೋಹಗಳು ಉಂಟಾಗುವುದಿಲ್ಲ ಎಂದು ಹೇಳಿದೆ. ಅಮೃತ ಪ್ರಾಪ್ತಿಯನ್ನು ವಿವರಿಸುವ ಈ ಉಪನಿಷತ್ ಕೊನೆಯ ಮಂತ್ರದಲ್ಲಿ ಮೋಕ್ಷೋಪಾಯದ ನಿರೂಪಣೆಯೊಂದಿಗೆ ಕೊನೆಗೊಳ್ಳುತ್ತದೆ.
ಮಹಾತ್ಮಾ ಗಾಂಧಿ ಅವರು "ಪೃಥ್ವಿಯಲ್ಲಿ ಇರುವ ಎಲ್ಲಾ ವೇದಾಂತ ಸಾಹಿತ್ಯವು ಇಲ್ಲವಾದರೂ ಈಶಾವಾಸ್ಯ ಉಪನಿಷತ್ ಒಂದು ಉಳಿದರೆ ಭಾರತದ ವೇದಾಂತ ಸಾಹಿತ್ಯವೆಲ್ಲವೂ ಉಳಿದಂತಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈಶಾವಾಸ್ಯದ ಒಂದೊಂದು ಶ್ಲೋಕವು ಇಂದಿನ ಯಾಂತ್ರಿಕ ಜೀವನಕ್ಕೆ ತೀರಾ ಅಗತ್ಯವಾದುದುದಾಗಿಗೆ. ಡಾ. ಡಿ.ವಿ.ಜಿ.ಅವರು ಈಶಾವಾಸ್ಯ ಉಪನಿಷತ್ ಭಗವದ್ಗೀತೆಗೆ ತಾಯಿ ಇದ್ದಂತೆ, ಗೀತೆಯ ಹರಿವಿಗೆ ಈ ಉಪನಿಷತ್ತೇ ಮೂಲ ಗಂಗೋತ್ರಿ ಎಂದು ವ್ಯಾಖ್ಯಾನಿಸಿದ್ದಾರೆ. ಇದರಲ್ಲಿನ ಗುಣ ವಿಶೇಷಣಗಳಿಂದಾಗಿ ಇದು ಚಿಕ್ಕದಾದರೂ "king of upanishats” " ಎಂದು ಅನ್ನಿಸಿಕೊಂಡಿದೆ.
ಬೃಹದಾರಣ್ಯಕ ಉಪನಿಷತ್.
ಹೆಸರಿಗೆ ತಕ್ಕಂತೆ ಇದು ಒಂದು
ಬೃಹತ್ ಜ್ಞಾನಾರಣ್ಯ ಈ
ಉಪನಿಷತ್ತಿನಲ್ಲಿ 6 ಅಧ್ಯಾಯಗಳು
ಇದ್ದು 57 ಬ್ರಾಹ್ಮಣಗಳು ಇವೆ. "ಪೂರ್ಣಮದಃ ಪೂರ್ಣಮಿದಂ..”. ಎಂಬುದೇ ಈ
ಉಪನಿಷತ್ತಿನ ಶಾಂತಿಮಂತ್ರ. ಈ
ಉಪನಿಷತ್ ಗದ್ಯಮಯವಾಗಿದ್ದು ಮದ್ಯೆ ಮದ್ಯೆ ಶ್ಲೋಕಗಳಿಂದ
ಕೂಡಿದೆ. ಮೊದಲ
ಎರಡು ಅಧ್ಯಾಯಗಳನ್ನು "ಮಧುಕಾಂಡ" ಎಂದು ಹೆಸರಿಸಲಾಗಿದೆ. ಇದರಲ್ಲಿ
ಬಹುದೇವತೋಪಾಸನೆಯನ್ನು ಮೀರಿರುವ
ಆತ್ಮತತ್ವವನ್ನು ಪ್ರತಿಪಾದಿಸಲಾಗಿದೆ. ಸೃಷ್ಟಿಚಕ್ರ ತಿರುಗುವುದೇ ಪರಸ್ಪರ
ಪ್ರೀತಿ ಸ್ನೇಹದಿಂದ, ಪೃಥ್ವಿಗೆ ಜೀವಕೋಟಿ ಮಧುವಾದರೆ, ಜೀವಕೋಟಿಗೆ ಪೃಥ್ವಿ
ಮಧು, ವಿಶ್ವ ಸಂಚಲನೆಗೆ ಈ
ಮಧುವೇ ಆಧಾರ
ಎಂಬ ತತ್ವವನ್ನು ವಿವರಿಸಲಾಗಿದೆ. ಮೂರನೆಯ
ಮತ್ತು ನಾಲ್ಕನೆಯ ಅಧ್ಯಾಯವನ್ನು
"ಮುನಿಕಾಂಡ" ಅಥವಾ
'ಯಾಜ್ಞವಲ್ಕ್ಯ ಕಾಂಡ" ಎಂದು ಕರೆಯುತ್ತಾರೆ. ಇದರಲ್ಲಿ
ಈ ಉಪನಿಷತ್ತಿನ ಮುಖ್ಯ
ಸಾರವನ್ನು ಒಳಗೊಂಡಿದೆ. ಯಾಜ್ಞವಲ್ಕ್ಯರು ಈ ಅಧ್ಯಾಯಗಳಲ್ಲಿ
ಆತ್ಮ-ಬ್ರಹ್ಮತತ್ವಗಳನ್ನು ವಿಸ್ತಾರವಾಗಿ ಮತ್ತು ಬಹು ಸೂಕ್ಷ್ಮವಾಗಿ
ವಿವರಿಸಿದ್ದಾರೆ. ಕೊನೆಯ ಎರಡು ಅಧ್ಯಾಯಗಳನ್ನು
"ಖಿಲಕಾಂಡ" ಎಂದು ಕರೆಯುತ್ತಾರೆ. ಇದರಲ್ಲಿ ಇಡೀ ವಿಶ್ವವೇ
ಒಂದು ಬೃಹತ್ ಯಜ್ಞಶಾಲೆ ಎಂಬ
ತತ್ವ ದರ್ಶನವನ್ನು ಬೆಳಗುತ್ತಾರೆ. ದೇವಯಜ್ಞ,
ಪಿತೃಯಜ್ಞ, ಋಷಿಯಜ್ಞ, ಮಾನವಯಜ್ಞ ,ಭೂತಯಜ್ಞ, ಎಂಬ ಪಂಚ ಮಹಾ
ಯಜ್ಞಗಳ ಉಪಾಸನಾ ಕ್ರಮಗಳನ್ನು ಹೇಳಿದೆ.
ಮಹಾ ವಾಕ್ಯಗಳಲ್ಲಿ ಒಂದಾದ "ಅಹಂ ಬ್ರಹ್ಮಾಸ್ಮಿ” ಎನ್ನುವ ವಾಕ್ಯವು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುತ್ತದೆ. ಇಂದು ಎಲ್ಲ ಕಡೆ ಹೇಳುವ "ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ" (ಅಂದರೆ ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ನನ್ನನ್ನು ಕರೆದೊಯ್ಯಿ) ಎಂಬ ಶಾಂತಿಮಂತ್ರ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವುದು . ಬೃಹದಾರಣ್ಯಕ ಉಪನಿಷತ್ ಎಂಬ ಮಹಾ ಪರ್ವತದಲ್ಲಿ ಮಹರ್ಷಿ ಯಾಜ್ಞವಲ್ಕ್ಯರು ಪ್ರಧಾನ ಶಿಖರವಾಗಿದ್ದರೆ ಜನಕ, ಮೈತ್ರೇಯಿ, ಗಾರ್ಗಿ ಇವರುಗಳು ಸಣ್ಣ ಸಣ್ಣ ಶಿಖರಗಳಾಗಿ ಕಾಣುತ್ತಾರೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ತತ್ವ ರತ್ನಗಳು ರಾಶಿ ರಾಶಿಯಾಗಿ ಸುರಿದಿವೆ.
ಯಾಜ್ಞವಲ್ಕ್ಯ ಸ್ಮೃತಿ.
ಮಹರ್ಷಿ ಯಾಜ್ಞವಲ್ಕ್ಯರು ಆತ್ಮ ತತ್ವದರ್ಶನದ ಮೇರು ಶಿಖರದಿಂದ ಕೆಳಗೆ ಇಳಿದು ನಮ್ಮ ಸಾಮಾಜಿಕ ಜೀವನದ ಒಳಿತಿಗಾಗಿ ಕೊಟ್ಟಿರುವ ಕೃತಿ ಇದು. ಈ ಕೃತಿಯನ್ನು ಅಭ್ಯಾಸ ಮಾಡಿದರೆ ಯಾಜ್ಞವಲ್ಕ್ಯರಲ್ಲಿ ಸಾಮಾನ್ಯರ ಜನರ ಬಗ್ಗೆ ಇದ್ದ ಹಿತಚಿಂತನೆ ಎದ್ದು ಕಾಣುತ್ತದೆ.
ಯಾಜ್ಞವಲ್ಕ್ಯ ಸ್ಮೃತಿಯಲ್ಲಿ
1010 ಶ್ಲೋಕಗಳು ಇದ್ದು ಆಚಾರ, ವ್ಯವಹಾರ ಮತ್ತು
ಪ್ರಾಯಶ್ಚಿತ್ತ, ಎನ್ನುವ ಮೂರು ಅಧ್ಯಾಯಗಳಲ್ಲಿ
ವಿಂಗಡಿಸಲಾಗಿದೆ. ಇದರಲ್ಲಿ
37 ಪ್ರಕರಣಗಳನ್ನು
ವಿವರಿಸಲಾಗಿದೆ.
ಮೊದಲೆನೆಯ ”ಆಚಾರ ಅಧ್ಯಾಯ" ದಲ್ಲಿ ಅರವತ್ನಾಲ್ಕು ವಿದ್ಯೆಗಳ ವಿವರ, ಷೋಡಶ ಸಂಸ್ಕಾರ, ಚತುರಾಶ್ರಮದ ಮಹತ್ವ, ಅಷ್ಟವಿಧ ವಿವಾಹ ಸಂಸ್ಕಾರದ ರೀತಿನೀತಿಗಳು, ರಾಜ ಧರ್ಮದ ಪ್ರಾಮುಖ್ಯತೆ, ದಾನದ ಹಿರಿಮೆ, ಗಣಪತಿ ಕಲ್ಪ , ಶ್ರಾದ್ಧ ವಿಧಾನ, ನವಗ್ರಹ ಆರಾಧನೆ, ವಿಧಿಸಂಕಲ್ಪ ಮತ್ತು ಪುರುಷ ಪ್ರಯತ್ನದ ಪ್ರಾಧಾನ್ಯತೆ, ಇವೆಲ್ಲದುರ ಬಗ್ಗೆ ವಿವರಣೆಯನ್ನು ಕಾಣುತ್ತೇವೆ. ಅಗ್ನಿ ಪುರಾಣ ಮತ್ತು ಗರುಡ ಪುರಾಣಗಳಲ್ಲಿ ಈ ಸ್ಮೃತಿಯಲ್ಲಿನ ಬಹಳಷ್ಟು ವಿಷಯಗಳು ಬಂದಿವೆ.
ಎರಡನೆಯ "ವ್ಯವಹಾರ" ಅಧ್ಯಾಯದಲ್ಲಿ ಹಿಂದೂ ಸನಾತನ ಧರ್ಮಶಾಸ್ತ್ರದ ನಿಯಮ ಕಾನೂನುಗಳನ್ನು ಬಹಳ ವಿಸ್ತಾರವಾಗಿ ವಿವರಸಲಾಗಿದೆ. ನ್ಯಾಯಾಲಗಳ ವ್ಯವಸ್ಥೆ, ಸಾಕ್ಷಿ ನೀಡುವ ರೀತಿ, ಸಾಕ್ಷಿಗಳ ವಿವಿಧ ರೂಪಗಳು ಶಿಕ್ಷೆ ನೀಡುವ ರೀತಿ, ಸಾಲ ತೆಗೆದು ಕೊಳ್ಳುವ ಹಾಗು ಕೊಡುವ ನಿಯಮಗಳು, ಸಂಪತ್ತನ್ನು ಹಂಚುವ ನಿಯಮಗಳು, ಸ್ತ್ರೀ ಧನ, ವಸ್ತುವನ್ನು ಮಾರುವ-ಕೊಳ್ಳುವ ನಿಯಮಗಳು ಇತ್ಯಾದಿ ವಿಷಯಗಳನ್ನು ವಿವರಿಸಲಾಗಿದೆ. ಈ ಸ್ಮೃತಿಯಲ್ಲಿ ಕಾನೂನನ್ನು ಕುರಿತಾದ ತೀರ್ಮಾನಗಳು ಪ್ರಾಮಾಣಿಕವಾಗಿದ್ದು ನ್ಯಾಯಾಲಯಗಲ್ಲಿ ಇಂದಿಗೂ ರೂಢಿಯಲ್ಲಿದೆ. ಕರ್ನಾಟಕದ ವಿಜ್ಞಾನೇಶ್ವರ ಪಂಡಿತ ಎಂಬುವವರು ಯಾಜ್ಞವಲ್ಕ್ಯ ಸ್ಮೃತಿಯ ಮೇಲೆ "ಮಿತಾಕ್ಷರ" ಎಂಬ ಟೀಕಾ ಗ್ರಂಥವನ್ನು ರಚಿಸಿದ್ದಾರೆ. ಇದು ಭಾರತೀಯ ಹಿಂದೂ ಕಾಯಿದೆಗೆ (Hindu Law) ಪ್ರಮಾಣ ಗ್ರಂಥವಾಗಿದೆ.
ಮೂರನೆಯ "ಪ್ರಾಯಶ್ಚಿತ್ತ" ಅಧ್ಯಾಯದಲ್ಲಿ ಪಾಪಪುಣ್ಯಗಳ ಕರ್ಮಕ್ಕೆ ಅನುಗುಣವಾಗಿ ಒದಗುವ ಗತಿಪ್ರಾಪ್ತಿ,, ಆಪತ್ ಧರ್ಮ, ವಾನಪ್ರಸ್ಥ ಧರ್ಮ, ಜನನ ಶೌಚ, ಮರಣ ಶೌಚ, ಅಗ್ನಿ ಸಂಸ್ಕಾರ, ಮರಣೋತ್ತರ ಸ್ಥಿತಿ ಇತ್ಯಾದಿಗಳ ಬಗ್ಗೆ ವಿವರಗಳು ಲಭ್ಯವಿದೆ.
ಮಹರ್ಷಿ ಯಾಜ್ಞವಲ್ಕ್ಯರು ಉಲ್ಲೇಖಿಸಿರುವ ಸಾಕಷ್ಟು ನ್ಯಾಯಾಂಗ ವಿಷಯಗಳು ಇಂದಿನ ನಮ್ಮ ಸಂವಿಧಾನದಲ್ಲೂ ಸಹ ಅಂಗೀಕೃತವಾಗಿದೆ. ಇವರನ್ನು ಪ್ರಾಚೀನ ಭಾರತದ ನ್ಯಾಯಶಾಸ್ತ್ರ ಮತ್ತು ಕಾನೂನಿನ ಪ್ರವರ್ಥಕರೆಂದೇ ಹೇಳುತ್ತಾರೆ. ಇವರ ಗೌರವ ಸಲುವಾಗಿ ನಮ್ಮ ಕೇಂದ್ರ ಸರ್ಕಾರವು ಸಂಸತ್ ಭವನದಲ್ಲಿ ಯಾಜ್ಞವಲ್ಕ್ಯರ ಚಿತ್ರವನ್ನು ಅನಾವರಣಗೊಳಿಸಿದೆ. ಆದಾಗ್ಯೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಯಾಜ್ಞವಲ್ಕ್ಯರ ಬಗ್ಗೆ ಸಂಶೋಧನೆ ನಡೆಸುವ ಅವಶ್ಯಕತೆ ಇನ್ನೂ ಬಹಳಷ್ಟು ಇದೆ ಎಂದು ನನ್ನ ಅಭಿಪ್ರಾಯ.
ಯೋಗ ಯಾಜ್ಞವಲ್ಕ್ಯ.
ಶ್ರೀ ಯಾಜ್ಞವಲ್ಕ್ಯರು ಯೋಗಶಾಸ್ತ್ರವನ್ನು ಕುರಿತು ಬರೆದಿರುವ ಈ ಗ್ರಂಥ 12 ಅಧ್ಯಾಯಗಳಲ್ಲಿ ವಿಷಯ ಪ್ರಾಪ್ತಿಯನ್ನು ಹರಡಿಕೊಂಡಿದೆ. 506 ಶ್ಲೋಕಗಳಲ್ಲಿ ಬ್ರಹ್ಮವಾದಿನಿ ಗಾರ್ಗಿ ಅವರೊಂದಿಗೆ ನಡೆಸಿದ ಸಂವಾದ ರೂಪದಲ್ಲಿ ಈ ಕೃತಿಯು ಮೂಡಿ ಬಂದಿದೆ. ಅಷ್ಟಾಂಗ ಯೋಗಗಳ ವಿವರಣೆ, ವೈದಿಕ ಕರ್ಮಗಳ ಅನುಷ್ಠಾನ, ಯೋಗಾಸನಗಳ ಪ್ರಾಮುಖ್ಯತೆ, ಪ್ರಾಣಾಯಾಮಗಳ ಮಹತ್ವ, ಯೋಗ ಸಾಧನೆಯ ವೈಶಿಷ್ಟ್ಯ ಅತೀಂದ್ರಿಯ ಅನುಭವಗಳ ಅಷ್ಟಸಿದ್ಧಿ ಪ್ರಾಪ್ತಿ ಮತ್ತು ಅವುಗಳ ಸದ್ವಿನಿಯೋಗ, ವಿವರಗಳನ್ನು ಯೋಗ ಸಾಧಕರಿಗೆ ವಿವರವಾಗಿ ಮನವರಿಕೆ ಆಗುವಂತೆ ನಿರೂಪಿಸಿದ್ದಾರೆ. ಯೋಗ ಸಾಧಕರಿಗೆ, ಅವರ ಸಾಧನಾ ಪಥದಲ್ಲಿ "ಯೋಗ ಯಾಜ್ಞವಲ್ಕ್ಯ" ಕೃತಿಯು ಒಂದು ದಾರಿದೀಪವಾಗಿದೆ
ಇನ್ನು ಶುಕ್ಲಯಜುರ್ವೇದ ಸಂಹಿತೆ ಮತ್ತು ಶತಪಥ ಬ್ರಾಹ್ಮಣ ಗ್ರಂಥಗಳ ಬಗ್ಗೆ ಬರೆಯಲು ಹೊರಟರೆ ನನ್ನ ಲೇಖನ ಇನ್ನೂ ಧೀರ್ಘವಾಗಬಹುದು ಎಂಬ ಭಯದಿಂದ ಇಲ್ಲಿಗೆ ನಿಲ್ಲಿಸಿದ್ದೇನೆ. ನನ್ನ ಈ ಬರಹ ಸಮುದ್ರದ ವಿಸ್ತಾರವನ್ನು ಬೊಗಸೆಯಲ್ಲಿ ತೋರಿಸಿದಂತಾಗಿದೆ.
ಮಹರ್ಷಿ ಯಾಜ್ಞವಲ್ಕ್ಯರು ಜಗತ್ತಿಗೆ ನೀಡಿರುವ ಆದ್ಯಾತ್ಮ ಜ್ಞಾನವನ್ನು ಕುರಿತು ನಮ್ಮ ದೇಶದ ಹೆಸರಾಂತ ವೇದಾಂತಿಗಳು ತತ್ವಜ್ಞಾನಿಗಳು ಆದ ಸ್ವಾಮಿ ವಿವೇಕಾನಂದ, ಡಾ. ರಾಧಾಕೃಷ್ಣನ್, ಮಹರ್ಷಿ ದೇವೇಂದ್ರನಾಥ ಠಾಕೂರ್, ವಿನೋಬಾ ಭಾವೆ, ಡಾ. ಡಿ.ವಿ.ಜಿ., ಇನ್ನೂ ಅನೇಕರು ಹಾಡಿ ಹೊಗಳಿದ್ದಾರೆ. ಪಾಶ್ಚಾತ್ಯ ವಿದ್ವಾಂಸರುಗಳಾದ ಮ್ಯಾಕ್ಸ್ ಮುಲ್ಲರ್, ಪ್ರೊಫೆಸರ್ ಗೆಡೆನ್ ಮಹರ್ಷಿ ಯಾಜ್ಞವಲ್ಕ್ಯರನ್ನು ಎಲ್ಲ ಕಾಲದ ವಿಶ್ವ ಶ್ರೇಷ್ಠ ದಾರ್ಶನಿಕ ಎಂದು ಬಣ್ಣಿಸಿದ್ದಾರೆ. ನಮ್ಮ ಆಚಾರ್ಯತ್ರಯರೂ ಮಹರ್ಷಿ ಯಾಜ್ಞವಲ್ಕ್ಯರು ಕೊಟ್ಟಿರುವ ವೇದ ಜ್ಞಾನದ ಬಗ್ಗೆ ಭಾಷ್ಯಗಳನ್ನು ಬರೆದಿದ್ದಾರೆ. ಶ್ರೀನಿಜಗುಣ ಶಿವಯೋಗಿಗಳು ಮಹರ್ಷಿ ಯಾಜ್ಞವಲ್ಕ್ಯರ ತತ್ವದರ್ಶನದ ಸಾರವನ್ನೆಲ್ಲ ತಮ್ಮ ಕನ್ನಡ ವಚನಗ್ರಂಥ "ಪರಮಾನುಭವ ಭೋದೆ" ಯಲ್ಲಿ ಹಿಡಿದಿಟ್ಟಿದ್ದಾರೆ..
ಹಿಂದೂ ಧರ್ಮದ ಚತುರಾಶ್ರಮಗಳಲ್ಲೂ (ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ
) ಪರಿಪೂರ್ಣ ಜೀವನ ನಡೆಸಿದ ಯಾಜ್ಞವಲ್ಕ್ಯರು ತಾವು
ಕಂಡ ತತ್ವದರ್ಶನದ ದಿವ್ಯ
ಬೆಳಕನ್ನು ಪ್ರಪಂಚಕ್ಕೆ ಕೊಟ್ಟಿರುತ್ತಾರೆ. ಹೇಗೆ
ಮಾನವನು ಭಗವದ್
ಭಕ್ತಿ ಹಾಗು
ಸ್ವಪ್ರಯತ್ನದಿಂದ ಲೌಕಿಕ ಹಾಗು ಪಾರಮಾರ್ಥಿಕವಾಗಿ
ಎಷ್ಟು ಮೇಲ್ಮಟ್ಟಕ್ಕೆ ಏರಬಹುದು, ಮಹತ್ಕ್ಕಾರ್ಯಗಳನ್ನು ಸಾಧಿಸಬಹುದು
ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ. ಈ
ಮಹಾನ್ ಬ್ರಹ್ಮರ್ಷಿ ಇಟ್ಟ ಹೆಜ್ಜೆ
ದೀಪದ ಹೆಜ್ಜೆ, ನುಡಿದ ನುಡಿ
ಜ್ಯೋತಿರ್ಮಂತ್ರ, ತೋರಿದ ನೆಲೆ ಬ್ರಹ್ಮಾನಂದ
ಧಾಮ. ಆದ ಕಾರಣದಿಂದಲೇ
ಇರಬೇಕು ಭಗವಾನ್ ಶ್ರೀಕೃಷ್ಣನ ನಂತರ
“ಯೋಗೀಶ್ವರ”
ಎಂದು ಹೆಸರು ಪಡೆದ ಮತ್ತೊಬ್ಬ
ಮಹಾ ಪುರುಷನೆಂದರೆ ಅದು ಮಹರ್ಷಿ ಯಾಜ್ಞವಲ್ಕ್ಯರು
ಮಾತ್ರ. ಇಂತಹ
ಶ್ರೇಷ್ಠ ಪುತ್ರನಿಗೆ ಜನ್ಮ ನೀಡಿದ
ಭಾರತ ಮಾತೆ ಮಾತ್ರವಲ್ಲ,
ವಸುಂಧರೆಯೂ ಧನ್ಯಳು.