ಗುಬ್ಬಿ ಚನ್ನಬಸವೇಶ್ವರ ರಥ

ಗುಬ್ಬಿ ಹಿಂದೆ ಅಮರ ಗೊಂಡ ಕ್ಷೇತ್ರವೆಂಬ ಹೆಸರಿನ ಪವಿತ್ರ ಸ್ಥಳವಾಗಿತ್ತೆಂದೂ ಇಲ್ಲಿ ಗೋಸಲ ಚನ್ನಬಸವೇಶ್ವರ, ಅಮರಗೊಂಡ ಮಲ್ಲಿಕಾರ್ಜುನ, ಮಲ್ಲಣಾರ್ಯ ಮುಂತಾದ ವೀರಶೈವಾಚಾರ್ಯರು ಇದ್ದರೆಂದೂ ಹೇಳಲಾಗಿದೆ. ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಮಲ್ಲಣಾರ್ಯನ ಪ್ರವಚನವನ್ನು ನಿತ್ಯವೂ ಕೇಳುತ್ತಿದ್ದ ಎರಡು ಗುಬ್ಬಚ್ಚಿಗಳು ಆ ಪ್ರವಚನ ಪರಿಸಮಾಪ್ತಿಗೊಂಡಾಗ ದೇಹತ್ಯಾಗ ಮಾಡಿ ಸದ್ಗತಿ ಪಡೆದವೆಂದೂ, ಆದ್ದರಿಂದಲೇ ಈ ಸ್ಥಳಕ್ಕೆ ಗುಬ್ಬಿ ಎಂಬ ಹೆಸರು ಬಂತೆಂದೂ ಹೇಳುತ್ತಾರೆ. ಮಲ್ಲಕಾರ್ಜುನನ ದೇವಾಲಯದಲ್ಲಿ ಆ ಗುಬ್ಬಚ್ಚಿಗಳದೆನ್ನಲಾದ ಸಮಾಧಿಯೊಂದು ಇದೆ. ಗುಬ್ಬಿ ಒಂದು ವ್ಯಾಪಾರಸ್ಥಳ. ಇಲ್ಲಿ ವಾರಕ್ಕೊಮ್ಮೆ ಸೇರುವ ಸಂತೆಗೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೂ ಸುತ್ತಮುತ್ತಣ ಸ್ಥಳಗಳಿಂದ ವರ್ತಕರೂ, ಗ್ರಾಹಕರೂ ಬರುತ್ತಾರೆ. ಬಟ್ಟೆ, ಕಂಬಳಿ, ಅಡಕೆ, ತೆಂಗಿನಕಾಯಿ, ಬೆಲ್ಲ, ಹುಣಸೆಹಣ್ಣು, ಗೋಧಿ, ಬತ್ತ, ರಾಗಿ, ಅರಗು ಮುಂತಾದವು ಇದರ ಸುತ್ತಮುತ್ತ ಉತ್ಪಾದನೆಯಾಗುವ ಪದಾರ್ಥಗಳು. ಸುತ್ತಮುತ್ತಣ ಸ್ಥಳಗಳಿಗೆಲ್ಲ ಇದೊಂದು ವ್ಯಾಪಾರಸ್ಥಳ, ಇಲ್ಲೊಂದು ನಿಯಂತ್ರಿತ ಮಾರುಕಟ್ಟೆಯಿದೆ. ಗುಬ್ಬಿಯಲ್ಲಿ ಗಾಡಿಗಳು ತಯಾರಾಗುತ್ತವೆ.

ಗುಬ್ಬಿಗೆ 3 ಕಿ.ಮೀ. ದೂರದಲ್ಲಿರುವ ಹೊಸಹಳ್ಳಿಯ ಗೌಡ ಈ ಪಟ್ಟಣವನ್ನು 400 ವರ್ಷಗಳ ಹಿಂದೆ ಸ್ಥಾಪಿಸಿದನೆಂದೂ ಈತ 700 ವರ್ಷಗಳ ಹಿಂದೆ ಇದ್ದ ಹೊನ್ನಪ್ಪಗೌಡನೆಂಬ ನೊಣಬ ಮುಖಂಡ ವಂಶಸ್ಥನೆಂದೂ ಹೇಳಲಾಗಿದೆ. ಮೈಸೂರಿನ ದೊರೆಗಳಿಗೆ ಈ ಮನೆತನದವರು ಕಪ್ಪ ಒಪ್ಪಿಸುತ್ತಿದ್ದರು. ಹೈದರನ ಕಾಲದಲ್ಲಿ ಇದನ್ನು 500 ಪಗೋಡಗಳಿಂದ 2,500 ಪಗೋಡಗಳಿಗೆ ಹೆಚ್ಚಿಸಲಾಯಿತು. ಟಿಪ್ಪು ಇವರ ಅಧಿಕಾರವನ್ನು ಕಿತ್ತುಕೊಂಡ.

ಗುಬ್ಬಿಯಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಾಚೀನವಾದ್ದು ಗದ್ದೆ ಮಲ್ಲೇಶ್ವರನ ದೇವಸ್ಥಾನ. ಇದು ಮೊದಲು ಊರ ಹೊರಗಿನ ಗದ್ದೆಯಲ್ಲಿತ್ತೆಂದೂ ಕ್ರಮೇಣ ಇದರ ಸುತ್ತಲೂ ಊರು ಬೆಳೆಯಿತೆಂದೂ ಹೇಳುತ್ತಾರೆ. ದೇವಾಲಯದ ನವರಂಗದಲ್ಲಿ ದಕ್ಷಿಣಾಮೂರ್ತಿ, ಪಾರ್ವತಿ ಮತ್ತು ವೀರಭದ್ರ ಮೂರ್ತಿಗಳಿವೆ. ವೈಲಪ್ಪ ಅಥವಾ ಓಹಿಲಪ್ಪ ದೇವಸ್ಥಾನವೂ ಪ್ರಸಿದ್ಧವಾದ್ದು. ಇಲ್ಲಿ ಶೈವ ಭಕ್ತ ಓಹಿಲನ ವಿಗ್ರಹವಿದೆ. ಗುಬ್ಬಿಯಪ್ಪ ಅಥವಾ ಗುಬ್ಬಿ ಚನ್ನಬಸವೇಶ್ವರ ದೇವಾಲಯ ಬಹಳ ದೊಡ್ಡದು. ಹೊಸಹಳ್ಳಿಯ ಪಾಳೆಯಗಾರ ಮುಮ್ಮಡಿ ಹೊನ್ನಪ್ಪಗೌಡನ ಕಾಲದಲ್ಲಿದ್ದ ಗುಬ್ಬಿಯಪ್ಪ ಅಥವಾ ಚನ್ನಬಸವಯ್ಯ ಎಂಬ ವೀರಶೈವ ಗುರುವಿನ ಗದ್ದಿಗೆ ಇಲ್ಲಿದೆ. ಇದಕ್ಕೆ ಈಚೆಗೆ ಸುಂದರವಾದ ಗೋಪುರವೊಂದನ್ನು ಕಟ್ಟಲಾಗಿದೆ. ಪ್ರತಿ ವರ್ಷದ  ಫಾಲ್ಗಣ ಶುದ್ಧ ದಶಮಿಯಂದು ಇಲ್ಲಿ ರಥೋತ್ಸವವು ನಡೆಯುತ್ತದೆ.