ಕುರುವಾಪುರ ದತ್ತಾತ್ರೇಯ ಜಯಂತಿ

ಸುಪ್ರಸಿದ್ಧ ದತ್ತ ಕ್ಷೇತ್ರ

ದತ್ತಾತ್ರೇಯರ ಮೊದಲ ಅವತಾರ ಶ್ರೀಪಾದ ಶ್ರೀವಲ್ಲಭರ ಕ್ಷೇತ್ರವಾದ ರಾಯಚೂರು ಜಿಲ್ಲೆಯ ದ್ವೀಪ ಪ್ರದೇಶ. ಕುರುವಗೆಡ್ಡೆಯಲ್ಲಿ ಶ್ರೀಪಾದಶ್ರೀವಲ್ಲಭರು 35 ವರ್ಷಗಳ ಕಾಲ ಇದೇ ಸ್ಥಳದಲ್ಲಿ ಜ್ಞಾನ, ವೈರಾಗ್ಯ ಸಿದ್ಧಿಗಾಗಿ ತಪಸ್ಸು ಮಾಡಿದರು ಎನ್ನಲಾಗಿದೆ. ಆಶ್ವಯುಜ ಬಹುಳ ದ್ವಾದಶಿಯಂದು ಅವರು ಕುರುವಾಪುರದ ಕೃಷ್ಣಾನದಿಯಲ್ಲಿ ಅದೃಶ್ಯರಾದರು. ಈ ದಿನವನ್ನು ಗುರು ದ್ವಾದಶಿ ಎಂದು ಆಚರಿಸುತ್ತಾರೆ. ಆದರೆ ಇಂದಿಗೂ ಗುರುಗಳು ಈ ಸ್ಥಳದಲ್ಲಿ ಸೂಕ್ಷ್ಮರೂಪದಲ್ಲಿದ್ದು ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿದ್ದಾರೆ ಎಂದು ನಂಬುವರು.

ಸ್ಕಾಂದ ಪುರಾಣದಲ್ಲಿ ಗುರುದ್ವೀಪವೆಂದು ಈ ಕ್ಷೇತ್ರದ ಉಲ್ಲೇಖವಿದ್ದು 28,000 ಯೋಗಿ ಮತ್ತು ಸಿದ್ಧ ಪುರುಷರು ಹಿಮಾಲಯದಿಂದ ಶ್ರೀಪಾದ ಶ್ರೀವಲ್ಲಭರನ್ನು ಕಾಣಲು ಬಂದಿದ್ದರೆಂದು ಎಂದು ಹೇಳಲಾಗಿದೆ. ನಿಜಾಮರ ಕಾಲದಲ್ಲಿ ಈ ಪ್ರದೇಶಕ್ಕೆ ಕುರುವಾಲಯ ಎಂದು ಕರೆಯುತ್ತಿದ್ದರು. ಟೇಂಬೆ ವಾಸುದೇವಾನಂದ ಸರಸ್ವತಿ ಸ್ವಾಮಿಗಳು 1911ರಲ್ಲಿ ಇದೇ ಸ್ಥಳದಲ್ಲಿ ತಮ್ಮ ಚಾತುರ್ಮಾಸ್ಯ ವ್ರತವನ್ನು ಆಚರಿಸಿದರು ಎಂಬ ಉಲ್ಲೇಖವಿದೆ. ಅವರ ಶಿಷ್ಯರಾದ ರಂಗಾವಧೂತ ಮಹಾಸ್ವಾಮೀಜಿ, ಗುಣವಣಿ ಮಹಾರಾಜ್‌ ಅವರು ಈ ಸ್ಥಳದಲ್ಲಿ ತಪಸ್ಸನ್ನು ಆಚರಿಸಿದ್ದಾರೆ.

ಇಲ್ಲಿ ಈ ದಿನದಂದು ದತ್ತಾತ್ರೇಯ ಜಯಂತಿಯನ್ನು ಆಚರಿಸುತ್ತಾರೆ.

ನೋಡಬೇಕಾದ ಸ್ಥಳಗಳು

ಒಂದು ಸಾವಿರ ವರ್ಷದ ವಟವೃಕ್ಷ, ಟೇಂಬೇ ಮಹಾರಾಜರು ತಪಸ್ಸು ಮಾಡಿದ್ದ ಗುಹೆ, ಔದುಂಬರ ವೃಕ್ಷ, ಸೂರ್ಯನಮಸ್ಕಾರ ಬಂಡೆ, ಕೃಷ್ಣಾ ನದಿ ದಂಡೆಯ ಆಚೆ ಬದಿಯಲ್ಲಿರುವ ವಲ್ಲಭಪುರ ಹಾಗೂ ಶ್ರೀ ವಿಠ್ಠಲಬಾಬಾ ಆಶ್ರಮ.

ತಲುಪುವ ಬಗೆ

ರಾಯಚೂರಿನಿಂದ 30 ಕಿ.ಮೀ. ದೂರದಲ್ಲಿದೆ. ಆತಕೂರು ಮಾರ್ಗವಾಗಿ ಕುರುವಾಪುರವನ್ನು ತಲುಪಬಹುದು. ಇದೀಗ ಹೈದರಾಬಾದ್‌ ಮೆಹಬೂಬ್‌ನಗರ ಮಾರ್ಗವಾಗಿ ಮಕ್ತಲ್‌ ಪ್ರದೇಶದಲ್ಲಿ ಇಳಿಯಬೇಕು. ಅಲ್ಲಿಂದ ಕುರುವಾಪುರವನ್ನು ಸುಲಭವಾಗಿ ತಲುಪಬಹುದು.