ತಲಕಾಡು ಶ್ರೀ ವೈದ್ಯನಾಥೇಶ್ವರ ರಥ

ತಲಕಾಡು ಗಂಗರಾಜರಿಗೆ ಬಹಳ ಕಾಲ ರಾಜಧಾನಿಯಾಗಿದ್ದು, ಕರ್ನಾಟಕದ ಸಾಂಸ್ಕೃತಿಕ ಕೇಂದ್ರವೆನಿಸಿತ್ತು. ಸಂಸ್ಕೃತದಲ್ಲಿ 'ದಲವನಪುರ' ಎಂದು ಕರೆಯಲ್ಪಡುವ ತಲಕಾಡಿಗೆ ತನ್ನದೇ ಆದ ಇತಿಹಾಸವಿದೆ.

ಪಂಚಲಿಂಗ ದೇವಾಲಯಗಳು

    ಶ್ರೀ. ವೈದ್ಯನಾಥೇಶ್ವರ, ಶ್ರೀ ಮರಳೇಶ್ವರ, ಶ್ರೀ. ಪಾತಾಳೇಶ್ವರ, ಶ್ರೀ ಅರ್ಕೇಶ್ವರ ಸ್ವಾಮಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ.

ಈ ಐದು ದೇವಸ್ಥಾನದಲ್ಲಿ ವೈದ್ಯನಾಥೇಶ್ವರ ಸ್ವಾಮಿಯೇ ಪಂಚಲಿಂಗಗಳಲ್ಲಿ ಪ್ರಮುಖವಾಗಿರುವುದು. ಈ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ದ್ವಾರದ ಅಕ್ಕ ಪಕ್ಕಗಳಲ್ಲಿ ಸುಂದರವಾದ ಸುಮಾರು 10 ಅಡಿ ಎತ್ತರವಿರುವ ದ್ವಾರ ಪಾಲಕರ ವಿಗ್ರಹವಿರುತ್ತದೆ. ಇಲ್ಲಿನ ಅಮ್ಮನವರಿಗೆ ಶ್ರೀ ಮನೋನ್ಮಣಿ ಎಂದು ಹೆಸರು.

ಪಂಚಲಿಂಗ ದರ್ಶನ

 ಯಾವ ಸಂವತ್ಸರದಲ್ಲಿ ಕಾರ್ತೀಕಮಾಸ, ಅಮಾವಾಸ್ಯೆ, ವೃಶ್ಚಿಕ ಸೋಮವಾರ, ಕುಹೂಯೋಗ ಮತ್ತು ಮಹಾ ನಕ್ಷತ್ರ, ಈ ಯೋಗಗಳು ಸೇರುವವೋ ಅಂತಹ ದಿವಸದಲ್ಲಿ (ಅಂದರೆ ಸುಮಾರು 3, 5, 7, 9, ಅಥವಾ 13 ವರ್ಷಗಳಿಗೊಮ್ಮೆ) ಈ ದಕ್ಷಿಣಕಾಶಿ ಗಜಾರಣ್ಯ ಕ್ಷೇತ್ರದಲ್ಲಿ ಮೇಲ್ಕಂಡ ಪಂಚಲಿಂಗಗಳನ್ನು ಒಂದೇ ದಿನದಲ್ಲಿ ಪೂಜಿಸುವ ದಿವಸಕ್ಕೆ "ಪಂಚಲಿಂಗ ದರ್ಶನ" ವೆಂದು ಹೆಸರು.

ಈ ಯೋಗ ಎಂದು ಕೂಡಿ ಬರುವುದೋ ಹೇಳಲಾಗುವುದಿಲ್ಲ. ಒಮ್ಮೊಮ್ಮೆ ಹತ್ತು ಹದಿನೈದು ವರ್ಷಗಳಾದರೂ ಆಗಬಹುದು.

ವೈದ್ಯನಾಥೇಶ್ವರ ದೇವಸ್ಥಾನದ ಪಕ್ಕದಲ್ಲಿ ಗೋಕರ್ಣವೆಂಬ ಪವಿತ್ರ ತೀರ್ಥವೂ ಇಲ್ಲಿದೆ.

ಈ ಪಂಚಲಿಂಗದರ್ಶನವನ್ನು ಒಂದೇ ದಿನದಲ್ಲಿ ಈ ಕೆಳಕಂಡಂತೆ ಅನುಸರಿಸಿ ನಡೆಯುವ ಪದ್ಧತಿ ಪೂರ್ವಾದಿಕಾಲದಿಂದಲೂ ನಡೆದುಕೊಂಡು ಬಂದಿದೆ:

ಮೊದಲು ಗೋಕರ್ಣ ಸರೋವರದಲ್ಲಿ ಸ್ನಾನ - ಗೋಕಣೀಶ್ವರ ದರ್ಶನ - ನಂತರ ಚೌಡೇಶ್ವರಿ ಪೂಜೆ - ನಂತರ ವೈದ್ಯನಾಥನಲ್ಲಿ ಅಪ್ಪಣೆ ಕೋರಿ ವಿಜಯಪುರದ ಅರ್ಕೇಶ್ವರ ದೇವಸ್ಥಾನಕ್ಕೆ ಪಯಣ.