ವರದಹಳ್ಳಿ ಶ್ರೀಧರ ಸ್ವಾಮಿ ಜಯಂತಿ

ಶ್ರೀಧರ ಸ್ವಾಮಿಗಳು (೧೯೦೮–೧೯೭೩) ಒಬ್ಬ ಪ್ರಮುಖ ಮರಾಠಿ-ಕನ್ನಡ ಸಂತರು ಮತ್ತು ಹಿಂದೂ ಧರ್ಮದ ಪ್ರವರ್ತಕರು. ಶ್ರೀಧರ ಸ್ವಾಮಿಗಳು ಹಿಂದೂ ದೇವತೆ ರಾಮನ ಭಕ್ತರು ಮತ್ತು ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು.

ಆರಂಭಿಕ ಜೀವನ

ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರಿನಲ್ಲಿ ’ಪತಕೀ’ ಎಂಬ ಮನೆತನದ ಋಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ ಕುಲದಲ್ಲಿ ಶ್ರೀ ಶ್ರೀಧರ ಸ್ವಾಮಿಗಳು ಜನಿಸಿದರು. ಕುಲಪುರೋಹಿತರು ಹೇಳಿದಂತೆ ಈ ದಂಪತಿಗಳು ಗಾಣಗಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ಗುಲ್ಬರ್ಗಾ ಜಿಲ್ಲೆಯಲ್ಲಿ ಗಾಣಗಾಪುರದಿಂದ ಸುಮಾರು ೨೫ ಕಿ.ಮೀ. ದೂರದ ಲಾಡ್ ಚಿಂಚೋಳಿಯಲ್ಲಿ ಡಿಸೆಂಬರ್ ೫, ೧೯೦೮ ರಲ್ಲಿ ಮಾರ್ಗಶೀರ್ಷ ಪೌರ್ಣಿಮೆಯಂದು ಶ್ರೀ ಶ್ರೀಧರರು ಜನ್ಮತಾಳಿದರು. ಈ ಶುಭ ದಿನದಂದು ಭಕ್ತಾದಿಗಳು ಅವರ ಜನ್ಮದಿನವನ್ನು ಆಚರಿಸುತ್ತಾರೆ.

ಶ್ರೀಧರರನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ಹೈದರಾಬಾದಿನ ಶಾಲೆಯೊಂದಕ್ಕೆ ಸೇರಿಸಲಾಯಿತು. ಬಾಲ್ಯದಿಂದಲೇ ಅವರು ಅಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಾಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಠೆಗಳಿದ್ದವು. ಅವರ ತಾಯಿ ಸಾವಿನ ನಂತರ ಶ್ರೀಧರರು ಗುಲ್ಬರ್ಗಾಕ್ಕೆ ಹೋಗಿ ನೂತನ ವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ನಂತರ, ಅವರು ಪುಣೆಗೆ ಹೋಗಿ ಕೆಲವು ಸಮಯಗಳ ಕಾಲ ಅನಾಥ ವಿದ್ಯಾರ್ಥಿ ಗೃಹ ಎಂಬ ಒಂದು ಅನಾಥಾಶ್ರಮದಲ್ಲಿ ಉಳಿದುಕೊಂಡರು. ಇಲ್ಲಿ ಅವರ ಆಧ್ಯಾತ್ಮಿಕ ಜ್ಞಾನ ಸಂಪಾದನೆಯ ಆಸಕ್ತಿ ಬೆಳೆಯಿತು. ಶ್ರೀ ಪಳ್ನಿಟ್ಕರ್ ಅವರ ಸಲಹೆಯ ಮೇರೆಗೆ ಅಧ್ಯಾತ್ಮ ಜ್ಞಾನ ಸಂಪಾದನೆಗಾಗಿ ಶ್ರೀ ಸಮರ್ಥ ರಾಮದಾಸರು ಸುಮಾರು ಮುನ್ನೂರು ವರ್ಷಗಳ ಹಿಂದೆ ವಾಸವಾಗಿದ್ದ ಸಜ್ಜನಗಡ ಎಂಬ ಸ್ಥಳಕ್ಕೆ ಹೊರಟರು.

ಆಧ್ಯಾತ್ಮಿಕ ಬೆಳವಣಿಗೆ

ಮುಂದಿನ ಮೂರು ವರ್ಷಗಳ ಕಾಲ, ಶ್ರೀಧರ ಸ್ವಾಮಿಗಳು ತಮ್ಮನ್ನು ತಾವು ಕಠಿಣ ಧ್ಯಾನ ಮತ್ತು ಸಜ್ಜನಗಡದಲ್ಲಿನ ಸಮರ್ಥ ರಾಮದಾಸರ ಮಠವನ್ನು ಬೆಳೆಸುವಲ್ಲಿ ತೊಡಗಿಸಿಕೊಂಡರು. ನಂತರ, ಶ್ರೀ ಸಮರ್ಥರು ಅವರನ್ನು ದಕ್ಷಿಣದ ಕಡೆ ಕರ್ನಾಟಕಕ್ಕೆ ಹೋಗಿ ಸನಾತನ ವೈದಿಕ ಧರ್ಮದ ನಿಜವಾದ ಸಂದೇಶಗಳನ್ನು ಹರಡಲು ನಿರ್ದೇಶಿಸಿದರು.

ಧಾರ್ಮಿಕ ಔನ್ನತ್ಯಕ್ಕಾಗಿ ಭಾರತ ಪ್ರವಾಸ

ಮುಂದಿನ ಹನ್ನೆರಡು ವರ್ಷಗಳ ಕಾಲ ಶ್ರೀಧರ ಸ್ವಾಮಿಗಳು ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನು ಬರಿಗಾಲಿನಲ್ಲಿ ಸಂಚರಿಸಿದರು. ಅವರು ದೇವಸ್ಥಾನಗಳು ಮತ್ತು ಮಠಗಳಲ್ಲಿ ಉಳಿದುಕೊಂಡು ಸನಾತನ ವೈದಿಕ ಧರ್ಮ ಮತ್ತು ಧಾರ್ಮಿಕ ಔನ್ನತ್ಯಕ್ಕಾಗಿ ಪ್ರವಚನಗಳನ್ನು ನೀಡಲಾರಂಭಿಸಿದರು. ೧೯೪೨ರಲ್ಲಿ ಶ್ರೀಧರ ಸ್ವಾಮಿಗಳು ಸಂನ್ಯಾಸ ಸ್ವೀಕರಿಸಿದರು ಮತ್ತು ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಶ್ರೀಧರ ಸ್ವಾಮಿಗಳು ಎಂಬ ಹೆಸರು ಪಡೆದರು. ಇದರ ನಂತರ ೧೯೬೭ರವರೆಗೆ ಅವರು ವ್ಯಾಪಕವಾಗಿ ಭಾರತದಾದ್ಯಂತ ಸಂಚರಿಸಿದರು ಮತ್ತು ತಮ್ಮ ಪ್ರವಚನಗಳು, ಬರಹಗಳು ಮತ್ತು ಆಧ್ಯಾತ್ಮಿಕ ಪ್ರವರ್ತನಗಳ ಮೂಲಕ ವೇದಗಳ ತಿರುಳಿನ ಸಂದೇಶಗಳನ್ನು ಸಾಮಾನ್ಯ ಜನರಿಗೆ ತಿಳಿಸಿದರು. ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರದ ಸಮೀಪದ ವರದಪುರ (ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ೧೯೬೭ರ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ಶ್ರೀಧರಾಶ್ರಮ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ತದನಂತರ ೧೯ ಏಪ್ರಿಲ್ ೧೯೭೩ರಲ್ಲಿ ಮಹಾಸಮಾಧಿ ಹೊಂದುವವರೆಗೆ ಅವರು ಹೆಚ್ಚಿನ ಭಾಗ ಒಂಟಿಯಾಗಿದ್ದುಕೊಂಡು ಧ್ಯಾನಸ್ಥರಾಗಿದ್ದರು.

ಶ್ರೀಧರ ಸ್ವಾಮಿಗಳು ಮರಾಠಿ, ಸಂಸ್ಕೃತ, ಕನ್ನಡ, ಹಿಂದಿ ಮತ್ತು ಆಂಗ್ಲದಲ್ಲಿ ಪ್ರತಿಭಾನ್ವಿತ ಬರಹಗಾರರಾಗಿದ್ದರು. ಅವರು ಮರಾಠಿ, ಕನ್ನಡ ಮತ್ತು ಆಂಗ್ಲದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು. 

ವರದಹಳ್ಳಿಯ ಹತ್ತಿರದ ಭಕ್ತಿಕೇಂದ್ರಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು

ಇಕ್ಕೇರಿಯ ಅಘೋರೇಶ್ವರ ದೇವಾಲಯ, ವರದಮೂಲ, ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಾಲಯ ಹಾಗೂ  ಜೋಗ್ ಜಲಪಾತ.

ಶ್ರೀ ಕ್ಷೇತ್ರಕ್ಕೆ ಹೋಗುವ ಮಾರ್ಗ

ಶ್ರೀ ಕ್ಷೇತ್ರ ಸಾಗರದಿಂದ ಕೇವಲ 7 ಕಿಮೀ ದೂರದಲ್ಲಿ ಇದೆ. ಸಾಗರದಿಂದ ಬಸ್ ಹಾಗೂ ಆಟೋ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರಕ್ಕೆ ಹೋಗಬಹುದು. ಹಾಗೆಯೇ ಇಕ್ಕೇರಿಯ ಮೂಲಕವು ಶ್ರೀಧರ ಆಶ್ರಮಕ್ಕೆ ಹೋಗಬಹುದು.