ಮರ್ಬ್ಬಳದ ತೀರ್ಥ
ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ
ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು
ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು
ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ
ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ
ಬಗ್ಗೆ ಶಾಸನವಿದೆ.
ಮೈಸೂರು ಅರಸರ ಕುಲದೇವತೆ
ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ
ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರೀ ಎಂದು ಕರೆದು, ತಮ್ಮ ಕುಲದೇವತೆಯಾಗಿ
ಪೂಜಿಸಿದರು ಎನ್ನುತ್ತದೆ ಇತಿಹಾಸ. ಅಂದಿನಿಂದ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬಹುದು
ಎನ್ನುತ್ತಾರೆ ಇತಿಹಾಸ ತಜ್ಞರು.
16 ಅಡಿ ಎತ್ತರದ ಹೆಬ್ಬಂಡೆಯಲ್ಲಿ ಕೆತ್ತಲಾಗಿರುವ
ನಂದಿಯ ಸುಂದರ ಮೂರ್ತಿ ಬೆಟ್ಟದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನಂದಿಯ ಮೂರ್ತಿಯಲ್ಲಿ ಗಂಟೆಸರ, ಗೆಜ್ಜೆಸರಗಳನ್ನು,
ಶಿಲ್ಪಿ ಸುಂದರವಾಗಿ ಕೆತ್ತಿದ್ದಾರೆ. ಬೆಟ್ಟದ ಮೇಲಿರುವ ಚಾಮುಂಡೇಶ್ವರೀ ಪುರಾತನ ದೇವಾಲಯ ದ್ರಾವಿಡ
ಶೈಲಿಯಲ್ಲಿದೆ. ಹಳೆಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ನವೀಕರಿಸಿ ಇದರ ಮಹಾದ್ವಾರಕ್ಕೆ
ಒಂದು ಸುಂದರವಾದ ಗೋಪುರವನ್ನು ಕಟ್ಟಿಸಿದ್ದಾರೆ. ದೇವಾಲಯ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು.
ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ
ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು
ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ
ಸಮರ್ಪಿಸಿದ್ದಾರೆ.
ರಥೋತ್ಸವ ಮತ್ತು ತೆಪ್ಪೋತ್ಸವ
ಪ್ರತಿವರ್ಷ ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರೀ ರಥೋತ್ಸವ ಜರುಗುತ್ತದೆ. ರಥೋತ್ಸವದ ಎರಡು ದಿನಗಳ ಬಳಿಕ ರಾತ್ರಿ ದೇವಾಲಯದ ಸಮೀಪದಲ್ಲೇ ಇರುವ ಕೊಳದಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.
ವಾಹನದಲ್ಲಿ ಬೆಟ್ಟಕ್ಕೆ ಹೋಗಿ ಇಳಿಯುತ್ತಿದ್ದಂತೆಯೇ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ ಸ್ವಾಗತಿಸುತ್ತದೆ. ಅಂಗಡಿಗಳ ಸಾಲಿನಲ್ಲಿ ಮುಂದೆ ಸಾಗಿದರೆ ಮಷಿಷಾಸುರನನ್ನೇ ಕೊಂದ ತಾಯಿ ಚಾಮುಂಡಿಯ ದರ್ಶನವೂ ದೊರಕುತ್ತದೆ.