ಭಾದ್ರಮಾಸದ
ಶುಕ್ಲ ಪಕ್ಷದ ತದಿಗೆಯಂದು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ. ಇದು ಗಣಪತಿ ವ್ರತದ ಜೊತೆಗೇ
ಬರುತ್ತದೆ. ಸ್ವರ್ಣಗೌರಿ ಪ್ರಕೃತಿ ಮಾತೆಯ ಸಂಕೇತ. ಈ ಕಾರಣದಿಂದ ಗೌರಿಗೆ ಹಸಿರು ಸೀರೆಯನ್ನು ಉಡಿಸಿ
ಸಂತಾನ ಮತ್ತು ಸೌಭಾಗ್ಯವನ್ನು ಕೋರಿ ಕೊಳ್ಳುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ಹರಿತಾಲಿಕಾ ಗೌರಿ
ವ್ರತ ಎಂದು ಆಚರಿಸುತ್ತಾರೆ.
ಪುರಾಣಗಳಲ್ಲಿ ದಕ್ಷ ಬ್ರಹ್ಮನ ಮಗಳು ಉಮೆಯಾಗಿ ಮೊದಲು ಜನಿಸಿದ್ದ ಗೌರಿ ತನ್ನ ಗಂಡನಿಗೆ ಆದ ಅವಮಾನದಿಂದ ನೊಂದು ದೇಹ ತ್ಯಾಗ ಮಾಡಿದ ನಂತರ ಹಿಮವಂತನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ. ಪಾರ್ವತಿ ಪರಶಿವರ ಪ್ರಣಯ ಪ್ರಸಂಗವನ್ನೇ ಕಾಳಿದಾಸ ಮಹಾಕವಿ ‘ಕುಮಾರ ಸಂಭವ’ ಕಾವ್ಯದ ರೂಪದಲ್ಲಿ ರಚಿಸಿದ್ದಾನೆ. ಕನ್ನಡದಲ್ಲಿ ಕೂಡ ಹರಿಹರ ಕವಿಯ ‘ಗಿರಿಜಾ ಕಲ್ಯಾಣ’ವಿದೆ. ಗೌರಿ ಎಂದರೆ ಶ್ವೇತ ವರ್ಣ ಎಂದು ಹೆಸರು. ಇದು ನಿರಾಕಾರ ಸ್ವರೂಪ ಕೂಡ ಹೌದು. ತನ್ನ ತಾಮಸ ರೂಪವನ್ನು ಕಾಳಿಯಾಗಿಸಿ ಪಾರ್ವತಿ ಶ್ವೇತ ವರ್ಣದ ಮೂಲಕ ಗೌರಿಯಾದಳು ಎನ್ನುವ ನಂಬಿಕೆ ಕೂಡ ಇದೆ. ತವರು ಮನೆಗೆ ಹೆಣ್ಣು ಮಕ್ಕಳು ಬಂದ ಸಂಭ್ರಮದೋಪಾದಿಯಲ್ಲಿ ಗೌರಿಯನ್ನು ತಮ್ಮ ಮನೆಗಳಿಗೆ ಜನರು ಬರ ಮಾಡಿ ಕೊಳ್ಳುತ್ತಾರೆ. ಮಾತೃಸ್ವರೂಪಿಯಾದ ಗೌರಿಯನ್ನು ಕಲಶರೂಪದಲ್ಲಿ ಪೂಜಿಸಲಾಗುತ್ತದೆ. ಹದಿನಾರು ಎಳೆ ದಾರದೊಂದಿಗೆ ಪೂಜಿಸುವ ಪದ್ದತಿ ಕೂಡ ಕೆಲವು ಕಡೆ ಇದೆ. ಗೌರಿ ಬಾಗಿನ ಕೊಡುವ ಪದ್ದತಿ ಕೂಡ ಕೆಲವು ಕಡೆ ಇದೆ. ಗೌರಿಯನ್ನು ಮನೆ ಮಗಳಂತೆ ಕರೆದು ಪೂಜಿಸುವುದಲ್ಲದೆ ಮನೆ ಮಗಳಂತೆಯೇ ಕಳುಹಿಸಲಾಗುತ್ತದೆ. ಶ್ರೀಗೌರಿಯನ್ನು ಕಳುಹಿಸಿ ಕೊಡಲು ವಿಷಮ ದಿನಗಳೇ ಆಗ ಬೇಕು ಅದರಲ್ಲಿ ಮಂಗಳವಾರ, ಶುಕ್ರವಾರ ಮತ್ತು ನವಮಿ ತಿಥಿಗಳು ವರ್ಜ್ಯ. ಇದನ್ನು ನೋಡಿ ಕೊಂಡು ಭಾದ್ರಪದ ಶುಕ್ಲ ಪಕ್ಷದಲ್ಲಿಯೇ ಸ್ವರ್ಣಗೌರಿಯನ್ನು ಮನೆ ಮಗಳಂತೆ ಕಳುಹಿಸಿ ಕೊಂಡಲಾಗುತ್ತದೆ.