ಸಿದ್ಧಗಂಗಾ ಶಿವಕುಮಾರಸ್ವಾಮಿ ಜಯಂತಿ


ಶಿವಕುಮಾರಸ್ವಾಮಿ (ಜನನ- ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯) - ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣ ತಜ್ಞ. ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ಧಗಂಗಾ ಮಠದ  ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ಧಗಂಗಾ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಅವರನ್ನು ರಾಜ್ಯದಲ್ಲಿ ‘ನಡೆದಾಡುವ ದೇವರು’ ಎಂದು ಕೂಡ ಉಲ್ಲೇಖಿಸಲಾಗಿದೆ. ಅವರಿಗೆ ಭಾರತ ಸರ್ಕಾರವು ೨೦೧೫ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ.

ಜೀವನ ಪರಿವರ್ತಕ

ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು. ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು.

ಶ್ರೀಗಳ ಪೂರ್ವಾಶ್ರಮ ಮಾಗಡಿ ತಾಲೂಕಿನ ವೀರಾಪುರದ ಜನಿಸಿದರು. ೧೯೨೭ರಲ್ಲಿ ಆಗಿನ ಸಿದ್ಧಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.

ಶಿವಧ್ಯಾನಿ ಹಾಗೂ ಪರೋಪಕಾರಿ

ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ-ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು.

ಪ್ರಶಸ್ತಿಗಳು

ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ೧೯೬೫ರಲ್ಲಿ ಗೌರವ ಡಾಕ್ಟರೇಟ್ , ರಾಜ್ಯದ ಮಹೋನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿ ೨೦೧೯ ಜನವರಿ ೨೧ ರಂದು ಬೆಳಗ್ಗೆ ಶ್ರೀಗಳು ಕೊನೆಯುಸಿರೆಳೆದರು.