ಪುರಿ ಜಗನ್ನಾಥ ರಥಯಾತ್ರೆ

ರಥಯಾತ್ರೆ ಎಂಬುದು ಪುರಿಯಲ್ಲಿ ನಡೆಯುವ ಜಗನ್ನಾಥನಿಗೆ ಸಂಬಂಧಿಸಿದ ಒಂದು ಹಬ್ಬ. ಇದು ಅತ್ಯಂತ ಹಳೆಯ ರಥಯಾತ್ರೆಯಾಗಿದ್ದು, ಅವುಗಳ ವಿವರಣೆಗಳನ್ನು ಬ್ರಹ್ಮ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಮತ್ತು ಕಪಿಲ ಸಂಹಿತೆಗಳಲ್ಲಿ ಕಾಣಬಹುದು. ಈ ವಾರ್ಷಿಕ ಉತ್ಸವವು ಆಷಾಢ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.

ಈ ಉತ್ಸವವು ಪುರಿಯ ಶಾರದಾ ಬಾಲಿಯ ಬಳಿ ಮೌಸಿ ಮಾಮಾ ದೇವಸ್ಥಾನ ಮೂಲಕ ಗುಂಡಿಚಾ ದೇವಾಲಯಕ್ಕೆ ಜಗನ್ನಾಥನ ಆಗಮನವನ್ನು ನೆನಪಿಸುತ್ತದೆ.

ಆಚರಣೆ

ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ, ಒಡಿಶಾದ ಪುರಿಯಲ್ಲಿ ಶ್ರೀ ಜಗನ್ನಾಥನ ರಥೋತ್ಸವ  ಆಚರಿಸಲಾಗುತ್ತದೆ. ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ರಥದಲ್ಲಿ ಮೆರವಣಿಗೆ ಮೂಲಕ ತರಲಾಗುತ್ತದೆ. ಗುಂಡೀಚಾ ದೇವಸ್ಥಾನದ ಭವ್ಯವಾದ ಸ್ಥಳವಾದ ‘ಬಡಾ ದಂಡ’ದ ಮೇಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಣ್ಣಬಣ್ಣದ ಅಲಂಕೃತ ರಥಗಳನ್ನು ಎಳೆಯುತ್ತಾರೆ. ಗುಂಡಿಚಾ ದೇವಾಲಯದಿಂದ ಹಿಂದಿರುಗುವಾಗ, ಈ ಮೂವರು ದೇವತೆಗಳು ಮೌಸಿ ಮಾಮಾ ದೇವಸ್ಥಾನದ ಬಳಿ ಸ್ವಲ್ಪ ಹೊತ್ತು ನಿಂತು, ವಿಶೇಷ ಪ್ರಕಾರದ ತಿನಿಸು ‘ಪೋಡಾ ಪಿತಾ’ವನ್ನು ಅರ್ಪಿಸುತ್ತಾರೆ. ಏಳು ದಿನಗಳ ಕಾಲ ತಂಗಿದ ನಂತರ ದೇವತೆಗಳು ತಮ್ಮ ವಾಸದ ಮನೆಗೆ ಹಿಂದಿರುಗುತ್ತವೆ.

ಗುಡಿಚಾ ದೇವಾಲಯದಿಂದ ಮುಖ್ಯ ದೇವಾಲಯಕ್ಕೆ ದೇವರ ರಥಗಳು ಹಿಂದಿರುಗಿದ ನಂತರ, ದೇವತೆಗಳನ್ನು ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ ಮತ್ತು ರಥದ ಮೇಲೆ ಪೂಜಿಸಲಾಗುತ್ತದೆ. ಈ ಹಬ್ಬವನ್ನು ‘ಸುನಾ ಬೇಶಾ’ ಎಂದು ಕರೆಯಲಾಗುತ್ತದೆ.