ಮಂಗಳ ಗೌರೀ ವ್ರತ

ಶ್ರೀ ಮಂಗಳ ಗೌರೀ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ 5 ವರ್ಷ ಈ ವ್ರತ ಮಾಡುವ ಪದ್ಧತಿ ಇದೆ.

ಆಚರಣೆ

ಈ ದಿನ ಮಂಗಳಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು. ಗಣಪತಿ, ಗೌರೀ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕಾರ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮೂಗು ಬರೆದು, ಅಲಂಕರಿಸಬೇಕು. ಇದೇ ಮಂಗಳಗೌರೀ ಮೂರ್ತಿ ಎಂದು ಭಾವಿಸಿಕೊಂಡು ಇದಕ್ಕೆ ಪೂಜೆ ಮಾಡಬೇಕು. ಕೆಲವು ಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ. ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು.

ಶ್ರೀ ಮಂಗಳಗೌರೀ ವ್ರತ

ಕೊಬ್ಬರಿಯಲ್ಲಿ ಗೌರೀ ದೇವಿಯ ರೂಪವನ್ನು ಚಿತ್ರಿಸಿ ಇಟ್ಟುಕೊಳ್ಳಬಹುದು.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೋಲೆ, ತಂಬಿಟ್ಟಿನ ಆರತಿ ಬೇಕಾಗುತ್ತೆ.

ಮೊದಲು ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರೀ ಪೂಜೆ ಮಾಡಬೇಕು. ಗೌರಿಗೆ 16 ಎಳೆಗಳ ಹತ್ತಿಹಾರ ಹಾಕಬೇಕು. ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ ಆರತಿ ಮಾಡಬೇಕು. ಈ ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ) ಹಿಡಿಯಬೇಕು. ಇದನ್ನು ಮಂಗಳ ಗೌರಿಗೆ ಹಚ್ಚಿ, ವ್ರತ ಮಾಡುವವರು ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಂಡು ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಇದನ್ನು ಬಾಗಿನದಲ್ಲಿ ಇಟ್ಟು ಕೊಡಬೇಕು.

ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು, ಅಕ್ಕಿ, ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ (ಮಾತೃ ಸಮಾನರಿಗೆ) ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.

ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:

1 ಜೊತೆ ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ.

ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ

ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು

ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ

ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ

ದೇವಿಗೆ ಕೊಡುವ ಬಾಗಿನದಲ್ಲಿ ಮೇಲೆ ಹೇಳಿರುವ ಸಾಮಾನುಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನು - ಗೆಜ್ಜೆವಸ್ತ್ರ, ಶ್ರೀಗಂಧ, ಊದಿನ ಕಡ್ಡಿ, ಇತ್ಯಾದಿ ಇಡುತ್ತಾರೆ.

ಮೊರದ ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ ಇದೆ.