ಜಗದ್ಗುರು ವಿದ್ಯಾರಣ್ಯ ಆರಾಧನಾ

ವಿದ್ಯಾರಣ್ಯರು

14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹರಿಹರರಾಯ ಮತ್ತು ಬುಕ್ಕರಾಯರ ಮಾರ್ಗದರ್ಶಕರಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೆಂದು ಐತಿಹ್ಯಗಳಲ್ಲಿ ಪ್ರಸಿದ್ಧರಾಗಿರುವ ಅದ್ವೈತ ಪಂಥದ ಯತಿ, ಶೃಂಗೇರಿ ಮಠಾಧೀಶ, ದರ್ಶನ, ಸಂಗೀತ ಇತ್ಯಾದಿಗಳ ಬಗ್ಗೆ ಶ್ರೇಷ್ಠ ಕೃತಿಗಳನ್ನು ರಚಿಸಿರುವ ಪ್ರತಿಭಾನ್ವಿತ ವಿದ್ವಾಂಸ.

ಇವರು ವಿದ್ಯಾಪ್ರೇಮಿಗಳಾಗಿದ್ದರೆಂದೂ ವಿಶಿಷ್ಟಾದ್ವೈತ ವೇದಾಂತ ದೇಶಿಕ, ದ್ವೈತಿ ಟೀಕಾಚಾರ್ಯ ಈ ಸಮಕಾಲೀನರನ್ನು ಗೌರವಿಸಿದ್ದರೆಂದೂ ಪ್ರತೀತಿಗಳಿವೆ. 1386ರಲ್ಲಿ ಹಂಪೆಯಲ್ಲಿ ಇಹಲೋಕವನ್ನು ತ್ಯಜಿಸಿದರೆಂದು ಅಲ್ಲಿಯ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಇವರ ಸಮಾಧಿ ಇದೆಯೆಂದೂ ಕೆಲವು ದಾಖಲೆಗಳು ತಿಳಿಸುತ್ತವೆ.

ವಿದ್ಯಾರಣ್ಯರು ಮತ್ತು ವಿಜಯನಗರ ಸಾಮ್ರಾಜ್ಯದ ಸ್ಥಾಪನೆ

ಶಿಥಿಲವಾಗುತ್ತಿದ್ದ ಹಿಂದುಧರ್ಮದ ಪುನರುದ್ಧಾರಕ್ಕೆ ಶಕ್ತಿಯುತ ಹಿಂದು ರಾಜ್ಯದ ಆವಶ್ಯಕತೆಯಿದೆ ಎಂಬುದನ್ನು ಗಮನಿಸಿದ ವಿದ್ಯಾರಣ್ಯರು, ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಪಂಪಾ ಕ್ಷೇತ್ರದಲ್ಲಿ ಒಂದು ಪಟ್ಟಣವನ್ನು ಕಟ್ಟಿ, ರಾಜ್ಯಸ್ಥಾಪನೆ ಮಾಡಬೇಕೆಂದು ಹರಿಹರ ಮತ್ತು ಬುಕ್ಕ ಎಂಬ ಸೋದರರನ್ನು ಪ್ರೋತ್ಸಾಹಿಸಿದರೆಂದೂ ಇವರು ಆ ಕಾರ್ಯವನ್ನು ನೆರವೇರಿಸಿ (1336) ತಮ್ಮ ಗುರುಗಳ ಹೆಸರಿನಲ್ಲಿ ವಿದ್ಯಾನಗರ ಎಂದು ಆ ನಗರಕ್ಕೆ ಹೆಸರಿಟ್ಟರೆಂದೂ ಮುಂದೆ ಅದೇ ವಿಜಯನಗರವೆಂದು ಪ್ರಸಿದ್ಧವಾಯಿತೆಂದು ಚರಿತ್ರಕಾರರು ಊಹಿಸಿದ್ದಾರೆ ಹಾಗೂ ಶಾಸನಗಳಲ್ಲೂ ಈ ಬಗ್ಗೆ  ಉಲ್ಲೇಖಿತಗೊಂಡಿದೆ.

ಶೃಂಗೇರಿ ಮಠದ ಗುರುಪರಂಪರೆಯಲ್ಲಿ ವಿದ್ಯಾರಣ್ಯರು 1331ರಲ್ಲಿ ಸಂನ್ಯಾಸ ಸ್ವೀಕಾರ ಮಾಡಿದರೆಂದೂ ಇವರ ಗುರುಗಳಾದ ಅಂದಿನ ಭಾರತೀತೀರ್ಥರ ಅನಂತರ 1377-86ರವರೆಗೆ ಪೀಠಾಧಿಪತಿಗಳಾಗಿದ್ದರೆಂದೂ ಉಲ್ಲೇಖಗಳಿವೆ. ವಿಜಯನಗರ ಅರಸರು ಶೃಂಗೇರಿ ಮಠಕ್ಕೆ ವಿಶೇಷ ಗೌರವಸ್ಥಾನವಿತ್ತಿದ್ದರು ಎಂಬುದು ಶಾಸನಗಳಿಂದ ಸ್ಪಷ್ಟವಾಗಿರುವುದಲ್ಲದೆ ವಿದ್ಯಾರಣ್ಯರ ಹೆಸರು ವಿಜಯನಗರ ಸಾಮ್ರಾಜ್ಯದ ಎರಡನೆಯ ದೊರೆ ಒಂದನೆಯ ಬುಕ್ಕನ ಹಲವು ಶಾಸನಗಳಲ್ಲಿ ಕಂಡುಬರುತ್ತದೆ.

ಕೊಡುಗೆಗಳು

ಸಂಪ್ರದಾಯದಲ್ಲಿ ಪ್ರಸಿದ್ಧರಾಗಿರುವ ವಿದ್ಯಾರಣ್ಯ ಬಹುಮುಖ ಪ್ರತಿಭೆಯ ವ್ಯಕ್ತಿ. ಇವರು ಹಿಂದು ರಾಜ್ಯ ಸ್ಥಾಪನೆಗೆ ಕಾರಣರೂ ಪ್ರಸಿದ್ಧ ಮಠದ ಅಧಿಪತಿಗಳೂ ಆಗಿದ್ದರು. ಶಂಕರಾಚಾರ್ಯರ ಅನಂತರ ಅದ್ವೈತ ವೇದಾಂತ ಪುಷ್ಟಿ ಪಡೆದಿದ್ದು ಇವರಿಂದಲೇ. ಇವರು ವಿವರಣಾ ಸಂಪ್ರದಾಯ ಎಂದು ಕರೆಯಲ್ಪಡುವ ಅದ್ವೈತ ಪರಂಪರೆಯನ್ನು ಸ್ಪಷ್ಟವಾಗಿ ನಿರೂಪಿಸಿ ಜನಪ್ರಿಯಗೊಳಿಸಿದರು. ಇವರ ವಿವರಣಾ ಪ್ರಮೇಯ ಸಂಗ್ರಹ ಈ ದೃಷ್ಟಿಯಿಂದ ಬರೆದ ಮಹತ್ತ್ವದ ಕೃತಿ. ಅದ್ವೈತ ವೇದಾಂತ ಸಾರವನ್ನು ನಿರೂಪಿಸುವ ಪಂಚದಶೀ, ಜೀವನ್ಮುಕ್ತಿ ವಿವೇಕ ಹಾಗೂ ಅನುಭೂತಿ ಪ್ರಕಾಶ ಎಂಬ ಗ್ರಂಥಗಳನ್ನೂ ಇವರು ಬರೆದಿದ್ದಾರೆ. ಭಾರತೀಯ ತತ್ತ್ವಶಾಸ್ತ್ರ ಪ್ರಕಾರಗಳ ಸುಲಭ ಪರಿಚಯವನ್ನು ಮಾಡಿಕೊಡುವ ಸರ್ವದರ್ಶನ ಸಂಗ್ರಹ, ಜ್ಯೋತಿಷ ಕೃತಿ ಕಾಲನಿರ್ಣಯ, ಶಂಕರವಿಜಯ ಮುಂತಾದ ಇತರ ಗ್ರಂಥಗಳೂ ಇವರೇ ರಚಿಸಿದರೆಂಬ ನಂಬಿಕೆ ಇದೆ. ಇವರ ‘ಕಾಲಮಾಧವ’ ಮತ್ತೊಂದು ಮಹತ್ ಕೃತಿ.

ಇವರು ಸಂಗೀತಸಾರ ಎಂಬ ಸಂಗೀತ ಗ್ರಂಥವನ್ನೂ ರಚಿಸಿದ್ದಾರೆ. ಅದರಲ್ಲಿ ರಾಗಗಳ ಜನಕ ಜನ್ಯ ರೀತಿಗಳ ಮೊದಲ ನಿರೂಪಣೆ ಇದೆ ಎಂದು ಒಂದು ಅಭಿಪ್ರಾಯವಿದೆ.