ಕುಮಾರವ್ಯಾಸ ಕಾವ್ಯನಾಮದಿಂದ ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪನು ಸಮೀಪದ ಕೋಳಿವಾಡದವನಾದರೂ ಅವನ ಕಾವ್ಯ ಪ್ರತಿಭೆ ಬೆಳಗಿದ್ದು ಗದಗಿನ ವೀರನಾರಯಣ ದೇವಸ್ಥಾನದಲ್ಲಿ. ಪಂಚಮ ವೇದದ ತತ್ವಾರ್ಥದ ಹೂವು ಅರಳಿದ್ದು ಈ ನೆಲದ ಬಳ್ಳಿಯಲ್ಲಿ. ಪುಷ್ಯ ಹುಣ್ಣಿಮೆ ಅಂಗವಾಗಿ ಕುಮಾರವ್ಯಾಸ ಜಯಂತಿ ಆಚರಿಸಲಾಗುತ್ತದೆ. ಗದುಗಿನ ಭಾರತ, ‘ಕರ್ಣಾಟ ಭಾರತ ಕಥಾಮಂಜರಿ’, ‘ಕುಮಾರವ್ಯಾಸ ಭಾರತ’ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಅಪೂರ್ವ ಗ್ರಂಥವನ್ನು ರಚಿಸಿದ ಕುಮಾರವ್ಯಾಸ ‘ಕೊನೇರಿ ತೀರ್ಥ’ದ ಜಲದಲ್ಲಿ ನಿತ್ಯ ಮಿಂದು ವೀರನಾರಯಣ ದೇವಸ್ಥಾನದ ರಂಗ ಮಂಟಪದ ಎರಡನೇ ಕಂಬದ ಹತ್ತಿರ ಶ್ರೀ ವೀರನಾರಯಣನ ಸಮ್ಮುಖದಲ್ಲಿ ಒದ್ದೆ ಬಟ್ಟೆ ಉಟ್ಟು ಬರೆಯಲು ಕುಳಿತರೆ ಶ್ರೀ ವೀರನಾರಯಣನೇ ಕವಿಯಾಗಿ, ಕುಮಾರವ್ಯಾಸ ಲಿಪಿಕಾರನಾಗಿ ಪಂಚಮವೇದವು ಕೃಷ್ಣ ಕಥೆಯಾಗಿ ಬರುತ್ತದೆ.
ಆದರೆ, ಭಾರತ ಕಥೆಯನ್ನು ಹೇಳುವಾಗ ದೇವರು ಒಂದು ಷರತ್ತು ವಿಧಿಸಿರುತ್ತಾನೆ. ಕಥನಕಾರನ ದನಿಯನ್ನು ಮಾತ್ರ ಕೇಳಬೇಕೇ ವಿನಾ ಯಾರು ಎಂದು ನೋಡುವ ಆಸಕ್ತಿ ತೋರಬಾರದು. ಅನೇಕ ವರ್ಷ ಹೀಗೇ ನಡೆಯುತ್ತದೆ. ಒಮ್ಮೆ ಕುಮಾರವ್ಯಾಸನಿಗೆ ಕಥನಕಾರದ ಕುರಿತು ತಿಳಿಯುವ ಕೂತೂಹಲ ತಡೆಯಲಾಗದೆ ನೋಡುವ ಪ್ರಬಲೇಚ್ಛೆ ತೋಡಿಕೊಳ್ಳುತ್ತಾನೆ. ಪರಮಾದ್ಭುತವೆಂಬಂತೆ ಸ್ವತಃ ದೇವರೇ ಕಥನಕಾರನಾಗಿರುತ್ತಾನೆ. ಆದರೆ ಷರತ್ತು ಮುರಿದಿದ್ದರಿಂದ ದೇವರು ಅದೃಶ್ಯನಾಗಿ ಬಿಡುತ್ತಾನೆ. ಭಾರತ ಕಥೆ ಅಲ್ಲಿಗೇ ನಿಂತುಬಿಡುತ್ತದೆ.
'ಕರ್ಣಾಟ ಭಾರತ ಕಥಾಮಂಜರಿ'ಯನ್ನು ರಚಿಸಿ ತನ್ನನ್ನೂ, ನಾಡನ್ನೂ, ಗದಗಿನ ವೀರನಾರಯಣನನ್ನೂ ಸಾಹಿತ್ಯ ನಕ್ಷೆಯಲ್ಲಿ ಅಜರಾಮರಗೊಳಿಸಿದ್ದಾನೆ. 'ಗದುಗಿನ ಭಾರತ'. 'ಕನ್ನಡ ಭಾರತ' ಎಂಬೆಲ್ಲ ಹೆಸರುಗಳಿಂದ ಜನಜನಿತವಾಗಿರುವ ‘ಕುಮಾರ ವ್ಯಾಸ ಭಾರತ’ ಕನ್ನಡ ಸಾಹಿತ್ಯಲೋಕದಲ್ಲೊಂದು ಮೈಲಿಗಲ್ಲು. ಈತನ ಕಥನಕ್ರಮಕ್ಕೆ, ಭಾಷೆಯ ನುಡಿಬೆಡಗಿನ ಕುರಿತು ರಾಷ್ಟ್ರಕವಿ ಕುವೆಂಪು- ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪಯುಗವಾಗುವುದು, ಭಾರತ ಕಣ್ಣಲ್ಲಿ ಕುಣಿವುದು; ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು- ಎಂದು ಬೆರಗಾಗಿ ಬರೆದರು.