ನಮ್ಮ ದೇಶದಲ್ಲಿನ ಶಿವ ಕ್ಷೇತ್ರಗಳಲ್ಲಿ 'ಶ್ರೀ ಶೈಲ'ವು ಪ್ರಮುಖವಾದದ್ದು. ಶ್ರೀಶೈಲದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ವೈಭವವಾಗಿ ನಡೆಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಮಹಾ ಶಿವರಾತ್ರಿ ಉತ್ಸವದೊಂದಿಗೆ ಭಕ್ತರು ಪ್ರತೀ ತಿಂಗಳೂ ನಡೆಯುವ 'ಮಾಸ ಶಿವರಾತ್ರಿ' ಯನ್ನೂ ಸಹ ಭಕ್ತಿ ಮತ್ತು ಶ್ರದ್ಧೆಗಳಿಂದ, ಚಿತ್ತ ಶುದ್ಧಿಯಿಂದ ನಡೆಸುತ್ತಾರೆ. ಅಂದು ಉಪವಾಸವಿದ್ದು ಜಾಗರಣೆಯನ್ನು ನಿಯಮಾನುಸಾರ ನಡೆಸುತ್ತಾರೆ.
ಶಿವರಾತ್ರಿ ವ್ರತವನ್ನು ಎರಡು ರೀತಿಯಲ್ಲಿ ಆಚರಿಸುತ್ತಾರೆ. ಪ್ರತಿವರ್ಷ ಮಾಘ ಬಹುಳ ತ್ರಯೋದಶಿಯಂದು ಮಹಾ ಶಿವರಾತ್ರಿಯೆಂದೂ ಮತ್ತು ಪ್ರತಿ ತಿಂಗಳೂ ಬಹುಳ ತ್ರಯೋದಶಿಯಂದು ಮಾಸ ಶಿವರಾತ್ರಿಯೆಂದೂ ಭಕ್ತರು ಶ್ರದ್ಧೆಯಿಂದ ಆಚರಿಸುತ್ತಾರೆ. ಮಹಾ ಶಿವರಾತ್ರಿ ಮತ್ತು ಮಾಸ ಶಿವರಾತ್ರಿ ವ್ರತಾಚರಣೆಯನ್ನು ಅಶ್ವಮೇಧಯಾಗಕ್ಕೆ ಹೋಲಿಸುತ್ತಾರೆ. ಮಾಸ ಶಿವರಾತ್ರಿ ವ್ರತವನ್ನು ಚಿತ್ತಶುದ್ಧಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸುವ ಭಕ್ತರ ಪಾಪಗಳು ನಶಿಸಿ ಮುಕ್ತಿ ಪ್ರಾಪ್ತಿಯಾಗುತ್ತದೆಂಬುದು ಐತಿಹ್ಯ.
ಶಿವರಾತ್ರಿ ವ್ರತದ ದಿನ ಶಿವ ಮತ್ತು ಶಕ್ತಿಯರ ಸಮ್ಮಿಲನವೆಂದು ಪ್ರತೀತಿ. ಮಾಸ ಶಿವರಾತ್ರಿ ಮತ್ತು ಪ್ರದೋಷ ಒಂದೇ ದಿನದಲ್ಲಿ, ಎಂದರೆ ಬಹುಳ ತ್ರಯೋದಶಿಯ ದಿನ ಬರುತ್ತದೆ. ಇಂದರಿಂದ ಭಕ್ತರಿಗೆ ಎರಡುಪಟ್ಟು ಪುಣ್ಯ ಲಭಿಸುತ್ತದೆ ಎನ್ನುವುದು ಐತಿಹ್ಯ. ಪುರಾಣದ ಕಥೆಗಳ ಪ್ರಕಾರ ಶಿವರಾತ್ರಿಯ ದಿನ ಮಧ್ಯರಾತ್ರಿ ಶಿವನು ಲಿಂಗಾಕಾರದಲ್ಲಿ ಪ್ರಕಟನಾದ ಎಂದು ಹೇಳಲ್ಪಟ್ಟಿದೆ. ವಿಷ್ಣು ಮತ್ತು ಬ್ರಹ್ಮ ಇಬ್ಬರೂ ಮೊದಲಬಾರಿಗೆ ಶಿವನ ಪೂಜೆ ಮಾಡಿದರು. ಶಿವರಾತ್ರಿಯನ್ನು ಶಿವನ ಜನ್ಮದಿನವೆಂದು ಆಚರಿಸುತ್ತಾರೆ. ಬ್ರಹ್ಮ ವಿಷ್ಣುವಿರೊಂದಿಗೆ ಸಕಲ ದೇವಾನುದೇವತೆಗಳೂ ಸಹ ಶಿವರಾತ್ರಿ ವ್ರತವನ್ನಾಚರಿಸುತ್ತಾರೆ.
ಸಂಕಲ್ಪ ಮತ್ತು ಆಚರಣೆ
ಮಹಿಮೆಯುಳ್ಳ ಮಾಸ ಶಿವರಾತ್ರಿ ವ್ರತವನ್ನಾಚರಿಸಲು ಬಯಸುವ ಭಕ್ತರು ಅದನ್ನು ಮಹಾ ಶಿವರಾತ್ರಿಯಂದು ಆರಂಭಿಸಬೇಕು. ಮಹಾ ಶಿವರಾತ್ರಿಯಂದು ಸಂಕಲ್ಪ ಮಾಡಿ ಅಂದಿನಿಂದ ಪ್ರತೀ ತಿಂಗಳೂ ಮಾಸ ಶಿವರಾತ್ರಿ ವ್ರತವನ್ನು ನಿಯಮದಿಂದ ಆಚರಿಸಬೇಕು. ವಿವಾಹಿತ ಮಹಿಳೆಯರು ಮಾಸ ಶಿವರಾತ್ರಿ ವ್ರತಾಚರಣೆಯಿಂದ ಯೋಗ್ಯ ಮಕ್ಕಳನ್ನು ಪಡೆಯುತ್ತಾರೆಂದೂ ಮತ್ತು ಅವಿವಾಹಿತರಿಗೆ ಯೋಗ್ಯ ಪತಿ ದೊರೆಯುವನೆಂದೂ ಮತ್ತು ದಂಪತಿಗಳು ಶಾಂತಿ ಸೌಭಾಗ್ಯವನ್ನು ಹೊಂದುವರೆಂದೂ ಐತಿಹ್ಯ. ಉಪವಾಸ ಮತ್ತು ಜಾಗರಣೆ ಮಾಸ ಮತ್ತು ಮಹಾಶಿವರಾತ್ರಿ ವ್ರತಾಚರಣೆಯ ಒಂದು ಭಾಗ. ಇದರಿಂದ ವ್ರತ ಸಂಪೂರ್ಣವಾಗುತ್ತದೆ. ಗೌರೀ ರೂಪದಲ್ಲಿ ಪಾರ್ವತಿ ಕನ್ಯೆಯರನ್ನು ಆಶೀರ್ವದಿಸುತ್ತಾಳೆ ಎನ್ನುವುದು ಪ್ರತೀತಿ.