ಮಲೆ ಮಹದೇಶ್ವರ ಜಾತ್ರೆ

ಮಲೆ/ಮಲೈ ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟದ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ ಮಹದೇಶ್ವರ ಬೆಟ್ಟ ದಖನ್ ಪ್ರಸ್ಥಭೂಮಿಯ ಬಹುಮುಖ್ಯ ಭಾಗವೂ ಕೂಡ.

ಮೈಸೂರಿನಿಂದ ೧೫೦ ಕಿ.ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ ೨೧೦ ಕಿ.ಮೀ ದೂರವಿದೆ. ಮಹದೇಶ್ವರ ಬೆಟ್ಟ. ಹಾಲುಮತ ಸಮುದಾಯಕ್ಕೆ ಮಹದೇಶ್ವರ ದೇವಸ್ಥಾನ ಮುಖ್ಯವಾದ ಭಕ್ತಿಕೇಂದ್ರವಾಗಿದೆ ಹಾಗೂ ಶಿವನ ಆರಾಧಾನಾ ಕೇಂದ್ರವೂ ಕೂಡ ಆಗಿದೆ. ಪ್ರತೀ ವರ್ಷ ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಭಕ್ತರನ್ನು ಮಹದೇಶ್ವರ ಬೆಟ್ಟ ಸೆಳೆಯುತ್ತದೆ. ದೇವಸ್ಥಾನ ಪ್ರಾಂಗಣ ಹಾಗೂ ಸಮುಚ್ಚಯಗಳು ಸೇರಿ ಸುಮಾರು ೧೫೦ ಎಕರೆಗಳಷ್ಟು ಪ್ರದೇಶ ವ್ಯಾಪಿಸಿಕೊಂಡಿದೆ. ಅದರ ಜೊತೆಗೆ ತಾಳು ಬೆಟ್ಟ, ಹಳೆಯೂರು, ಇಂಡಿಗನಾಥ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಸೇರಿದ ಜಾಗಗಳಿವೆ. ಮಹದೇಶ್ವರ ಬೆಟ್ಟ ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ, ಹಾಗಿದ್ದಾಗ್ಯೂ ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ.

ಕಥಾನಕ

ದೇವಸ್ಥಾನದ ಗರ್ಭಗುಡಿಯೊಳಗಿನ ಲಿಂಗ ಯಾರಿಂದಲೂ ರಚನೆಯಾಗಿದ್ದಲ್ಲ, ಬದಲಾಗಿ ಸ್ವಯಂಭು ಅಥವಾ ತಾನಾಗೇ ಉಧ್ಭವವಾಗಿರುವಂತಹುದು. ಮಲೆ ಮಹದೇಶ್ವರರು ಹುಲಿಯನ್ನೇ ತಮ್ಮ ವಾಹನವನ್ನಾಗಿ ಮಾಡಿಕೊಂಡು ಅದರ ಮೇಲೆ ಕುಳಿತು ಬೆಟ್ಟಗಳನ್ನು ಸುತ್ತುತ್ತ ಆರ್ತರನ್ನು ರಕ್ಷಿಸುತ್ತಿದ್ದ ವಿಚಾರಗಳು ಇತಿಹಾಸ ಹಾಗೂ ಜಾನಪದ ಗಾಯನಗಳಿಂದ ತಿಳಿದುಬರುತ್ತದೆ. ಮಹದೇಶ್ವರ ಬೆಟ್ಟದಲ್ಲಿ ಈಗಲೂ ಹುಲಿವಾಹನ ಮಹದೇಶ್ವರ ಮೆರವಣಿಗೆ ಮೂರ್ತಿಯಿದೆ.  ವಿಶೇಷ ಸಂಧರ್ಭಗಳಲ್ಲಿ ಹುಲಿವಾಹನ ಅಲಂಕಾರವಿರುತ್ತದೆ.

ಮಾಯಾ ವಿದ್ಯೆಗಳನ್ನು ತಂತ್ರವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ 'ಶ್ರವಣ' ಎಂಬ ರಾಕ್ಷಸ ತಪಸ್ಸಿನಲ್ಲಿ ತೊಡಗಿಕೊಂಡಿದ್ದ ಸಾಧು ಸಂತರಿಗೆ ತನ್ನ ಮಾಯಾ ಶಕ್ತಿಗಳನ್ನು ಉಪಯೋಗಿಸಿ ತೊಂದರೆ ಮಾಡಿ ಅವರ ತಪಸ್ಸಿಗೆ ಭಂಗವುಂಟು ಮಾಡುತ್ತಿದ್ದುದೇ ಅವನ ಕಾಯಕ.

ಮಹದೇಶ್ವರರು ಶ್ರವಣನಿಗೆ ಎದುರಾಗಿ ಆತನ ಮಾಯಾ ತಂತ್ರವಿದ್ಯೆಗಳನ್ನೆಲ್ಲ ನಾಶ ಮಾಡಿ, ಆತನ ವಶದಲ್ಲಿದ್ದ ಸಾಧು ಸನ್ಯಾಸಿಗಳನ್ನು ಸ್ವತಂತ್ರ್ಯಗೊಳಿಸಿದರು ಎನ್ನುವುದು ಜಾನಪದ ಕಾವ್ಯಗಳಿಂದ ತಿಳಿದುಬರುವ ವಿಷಯವಾಗಿದೆ.

ಶ್ರವಣನ ಕಪಿಮುಷ್ಠಿಯಲ್ಲಿ ಬಂಧಿಯಾಗಿ ದಿನ ಕಳೆದಿದ್ದ ಅಸಂಖ್ಯಾತ ಮುನಿಗಳಿದ್ದ ಸ್ಥಳವೇ ಇಂದು 'ತಾವಸೆರೆ'ಯಾಗಿದೆ. ರಾಕ್ಷಸ ಶ್ರವಣ ಬದುಕಿದ್ದ ಜಾಗವನ್ನು 'ಶ್ರವಣ ಬೋಲಿ' ಎಂದು ಕರೆಯಲಾಗುತ್ತಿದೆ. ಮಹದೇಶ್ವರರು ಜನರನ್ನು, ಪ್ರಮುಖವಾಗಿ ಆದಿವಾಸಿ, ಗಿರಿಜನಗಳನ್ನು ಸುಶಿಕ್ಷಿತ, ಸಭ್ಯ ಜನಗಳನ್ನಾಗಿ ಪರಿವರ್ತಿಸುವಂತಹ ಕಾರ್ಯಗಳಿಗಾಗಿ ಮಠ ಸ್ಥಾಪಿಸಿದ್ದರು.

ಮಹದೇಶ್ವರರ ಕಥಾನಕದಂತೆ ಅಲ್ಲಿನ ಏಳು ಮಲೆ(ಬೆಟ್ಟ)ಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯಲಾಗುತ್ತದೆ. ೭೭ ಬೆಟ್ಟಗಳಲ್ಲಿ- ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ, ರುದ್ರಾಕ್ಷಿ ಮಲೆ, ವಿಭೂತಿಮಲೆ, ಕೊಂಗುಮಲೆ ಬೆಟ್ಟಗಳಿಂದ ಸುತ್ತುವರೆದ ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.