ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ
ಮುಖ್ಯವಾದುದು. ಇದು ಕೊನೆಯ ತೀರ್ಥಂಕರನಾದ ಮಹಾವೀರನ ಜನ್ಮದಿನವನ್ನು ಆಚರಿಸುತ್ತದೆ. ಮಹಾವೀರ ಜನಿಸಿದ್ದು
ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ವರ್ಷ ಕ್ರಿ.ಪೂ. ೫೯೯ ಅಥವಾ ಕ್ರಿ.ಪೂ. ೬೧೫.ಮಹಾವೀರನು ಗನರಾಜ್ಯ
ಎಂಬ ರಾಜ್ಯದಲ್ಲಿ ಜನಿಸಿದರು. ವಿಜ್ಜಿ ಎಂಬ ರಾಜನು ಆ ಸಮಯದಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದನು.
ಆಂಗ್ಲ ಕ್ಯಾಲೆಂಡರ್ ನಲ್ಲಿ ಈ ಹಬ್ಬ
ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ನ ಆರಂಭದಲ್ಲಿ ಉಂಟಾಗುತ್ತದೆ.
ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು
ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ. ನಂತರ
ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು,
ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ
ಚಂದಾ ಎತ್ತಲಾಗುತ್ತದೆ. ಈ ದಿನದಂದು ಗುಜರಾತ್ ರಾಜ್ಯದ ಗೀರ್ನಾರ್ ಮತ್ತು ಪಲಿತಾನಾ ದಲ್ಲಿರುವ ಬಸದಿಗಳಿಗೆ
ದೇಶದ ಎಲ್ಲೆಡೆಗಳಿಂದ ಭಕ್ತರು ಬರುತ್ತಾರೆ.
ಮಹಾವೀರ ಜಯಂತಿ ಹಬ್ಬದ ಇತಿಹಾಸದ ಒಂದು ಕಿರು ನೋಟ
ಇದುವರೆಗೆ ಸಿಕ್ಕಂತಹ ಜೈನರ ಗ್ರಂಥಗಳು
ಮತ್ತು ಜೈನ ಧರ್ಮದ ಲಿಪಿಗಳ ಪ್ರಕಾರ, ಭಗವಾನ್ ಮಹಾವೀರನು ಪಾಟ್ನಾದಿಂದ ಸ್ವಲ್ಪ ದೂರವಿರುವ ಬಿಹಾರಿನ
ಕುಂದಲಾಪುರದಲ್ಲಿ ಭಾರತೀಯ ಪಂಚಾಂಗದ ಚೈತ್ರ ಮಾಸದ 13 ನೆಯ ದಿನದಂದು ಜನ್ಮ ತಾಳಿದನು. ಆ ಸಮಯದಲ್ಲಿ
ವೈಶಾಲಿ ಎಂಬ ಸ್ಥಳ ಬಿಹಾರ್ ರಾಜ್ಯದ ರಾಜಧಾನಿಯಾಗಿತ್ತು. ವೈಶಾಲಿಯ ರಾಜ ಸಿದ್ದಾರ್ಥ ಮತ್ತು ರಾಣಿ
ತ್ರಿಶಲ. ಇವರಿಬ್ಬರಿಗೆ ಹುಟ್ಟಿದ ಮಗುವನ್ನು ' ವರ್ಧಮಾನ ' ಎಂದು ನಾಮಕರಣ ಮಾಡಿದರು. ಭಗವಾನ್ ಮಹಾವೀರ
ಹುಟ್ಟಿದ ವರ್ಷ ಇಂದಿಗೂ ಕೂಡ ಗೊಂದಲಮಯವಾಗಿದೆ. ಏಕೆಂದರೆ ಜೈನರ ಒಂದು ಪಂಗಡವಾಗಿರುವ ಶ್ವೇತಾಂಬರ ಜೈನರು
ಹೇಳುವ ಪ್ರಕಾರ ಕ್ರಿಸ್ತ ಪೂರ್ವ 599 ರಲ್ಲಿ ಮಹಾವೀರ ಹುಟ್ಟಿದ್ದಾನೆ ಎಂದು ಪ್ರತೀತಿ ಇದೆ. ಅದೇ ದಿಗಂಬರ
ಜೈನರು ಹೇಳುವ ಪ್ರಕಾರ ಕ್ರಿಸ್ತ ಪೂರ್ವ 615 ಭಗವಾನ್ ಮಹಾವೀರ ಹುಟ್ಟಿದ ವರ್ಷವಾಗಿದೆ ಎಂದು ನಂಬಲಾಗಿದೆ.
ಹಾಗಾಗಿ ಇದಕ್ಕೆ ಪೂರಕವಾದ ಸ್ಪಷ್ಟ ಸಾಕ್ಷಿ ಇನ್ನೂ ದೊರೆತಿಲ್ಲ.
ವರ್ಧಮಾನ ಮಹಾವೀರನಾಗಿ ಬದಲಾದ ಕಥೆ : -
ಶ್ವೇತಾಂಬರ ಪಂಗಡದ ನಂಬಿಕೆಯ ಪ್ರಕಾರ
ಮಹಾವೀರನ ತಾಯಿ 14 ಕನಸುಗಳನ್ನು ಇಟ್ಟುಕೊಂಡಿದ್ದಳು. ಅವೆಲ್ಲವೂ ಕೂಡ ತನ್ನ ಮಗ ವರ್ಧಮಾನ ರಾಜನಾಗುತ್ತಾನೆ
ಇಲ್ಲವೇ ಸನ್ಯಾಸಿಯಾಗುತ್ತಾನೆ ಎಂಬ ಪ್ರಕಾರವಾಗಿದ್ದವು. ಜ್ಯೋತಿಷ್ಯ ಶಾಸ್ತ್ರಜ್ಞರು ಅವುಗಳನ್ನು ಎಳೆಎಳೆಯಾಗಿ
ಬಿಚ್ಚಿಡುತ್ತಾ ಅವರ ಪಂಗಡದಲ್ಲಿ ಸನ್ಯಾಸಿ ಎಂದರೆ ‘ ತೀರ್ಥಂಕರ ‘ ಎಂದು ಕರೆಯುವರು ಎಂದು ವಿಶ್ಲೇಷಣೆ
ಮಾಡುತ್ತಾರೆ.
ವರ್ಧಮಾನ ಮಹಾವೀರನಾದ
30 ವರ್ಷ ವಯಸ್ಸಿನವರೆಗೂ ರಾಜ್ಯಭಾರ
ಮಾಡುತ್ತಿದ್ದ ಮಹಾವೀರ ನಂತರ ಇದ್ದಕ್ಕಿದ್ದಂತೆ ತನ್ನ ಸಿಂಹಾಸನ ಮತ್ತು ತನ್ನ ಕುಟುಂಬವನ್ನು ತೊರೆದು
ಸತ್ಯದ ಅನ್ವೇಷಣೆಯಲ್ಲಿ ತನ್ನದೇ ಆದ ದಾರಿಯಲ್ಲಿ ಒಬ್ಬನೇ ಸಾಗುತ್ತಾನೆ. ಸುಮಾರು 12 ವರ್ಷಗಳ ತನಕ
ತಪಸ್ವಿಯಾಗಿ ತನ್ನ ರಾಜ್ಯವನ್ನು ಬಿಟ್ಟಿದ್ದನು. ಈ ಸಮಯದಲ್ಲಿ ಮಹಾವೀರ ಪ್ರತಿಯೊಬ್ಬರಿಗೂ ಅಹಿಂಸಾ
ಮಾರ್ಗವನ್ನು ಬೋಧನೆ ಮಾಡಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಮತ್ತು ಯಾರನ್ನೂ ತಿರಸ್ಕಾರ ಭಾವನೆಯಿಂದ
ನೋಡಬಾರದು ಎಂದು ತಿಳಿಸಿದನು. ವರ್ಧಮಾನ ಆಗಿದ್ದ ಮನುಷ್ಯ ಮಹಾವೀರನಾಗಿ ಬದಲಾಗಲು ಆತನಲ್ಲಿದ್ದ ವಿಶಿಷ್ಟವಾದ
ಚಾತುರ್ಯಗಳು ಮತ್ತು ಸೂಕ್ಷ್ಮ ಸಂವೇದನಾ ಶಕ್ತಿ ಕಾರಣವಾಯಿತು. ಹಲವು ಜೈನ ಧಾರ್ಮಿಕ ಗ್ರಂಥಗಳ ಪ್ರಕಾರ
ಮಹಾವೀರನು ತನ್ನ 72 ವಯಸ್ಸಿಗೆ ಜ್ಞಾನೋದಯವನ್ನು ಪಡೆದನು. ಜೈನ ಸಾಹಿತ್ಯದಲ್ಲಿ ಇದನ್ನು ' ನಿರ್ವಾಣ
' ಎಂದು ಕರೆಯುತ್ತಾರೆ.
ಮಹಾವೀರ ಜಯಂತಿ ಸಂಭ್ರಮಾಚರಣೆಗಳು
ಮಹಾವೀರ ಜಯಂತಿ ಜೈನರಿಗೆ ಬಹು ದೊಡ್ಡ
ಹಬ್ಬ. ಈ ಸಮಯದಲ್ಲಿ ಅವರು ಹಲವಾರು ಬಗೆಯ ಸಂಭ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ದೂರದ ಬಂಧು - ಬಳಗ,
ನೆಂಟರು - ಇಷ್ಟರು ಮತ್ತು ಸ್ನೇಹಿತರುಗಳು ಒಟ್ಟಿಗೆ ಕೂಡಿ ಹಬ್ಬ ಆಚರಿಸುತ್ತಾರೆ. ಈ ಸಂದರ್ಭದಲ್ಲಿ
ಎಲ್ಲರೂ ಭಗವಾನ್ ಮಹಾವೀರನನ್ನು ಭಕ್ತಿಯಿಂದ ಪೂಜಿಸಿ ಸ್ಮರಿಸುತ್ತಾರೆ. ಪ್ರತಿಯೊಬ್ಬ ಜೈನರ ಮನೆಯಲ್ಲೂ
ಕೂಡ ಭಗವಾನ್ ಮಹಾವೀರನ ಪ್ರತಿಮೆ ಇಟ್ಟು, ಅದಕ್ಕೆ ಸುಗಂಧ ಭರಿತವಾದ ತೈಲದಿಂದ ಅಭ್ಯಂಜನ ಸ್ನಾನ ಮಾಡಿಸಿ
ತಮ್ಮ ಪರಿಶುದ್ಧವಾದ ಭಕ್ತಿಯನ್ನು ಸಮರ್ಪಿಸಿ ಪೂಜಿಸುತ್ತಾರೆ.
ಭಗವಾನ್ ಮಹಾವೀರ ಇಡೀ ವಿಶ್ವದಲ್ಲೇ
ತನ್ನ ಭಕ್ತಗಣವನ್ನು ಹೊಂದಿದ್ದು, ಮಹಾವೀರ ಜಯಂತಿಯಂದು ಎಲ್ಲರೂ ಕೂಡ ತಮ್ಮ - ತಮ್ಮ ದೇಶಗಳಲ್ಲಿನ ಜೈನ
ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಮಾಡಿಸುತ್ತಾರೆ. ಪ್ರಾಚೀನ ಕಾಲದಿಂದಲೂ ಜೈನ ಧರ್ಮದೊಂದಿಗೆ ಅವಿನಾಭಾವ
ಸಂಬಂಧ ಹೊಂದಿರುವ ಪುರಾತನ ಸ್ಥಳಗಳಿಗೆ ಭೇಟಿ ಕೊಡುವ ಅಭ್ಯಾಸ ಹೊಂದಿರುತ್ತಾರೆ. ಉದಾಹರಣೆಗೆ ಮಹಾವೀರ
ಜಯಂತಿಯಂದು ಪ್ರತಿಯೊಬ್ಬರು ಗೋಮಟೇಶ್ವರ ನೆಲೆಗೊಂಡಿರುವ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ಹಲವಾರು
ಜೈನ ಮಂದಿ ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹಣ ಮತ್ತು ಆಹಾರಗಳನ್ನು ಸಮರ್ಪಿಸುತ್ತಾರೆ. ಇದರಿಂದ
ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಾಡಾಗುತ್ತದೆ.
ನಮ್ಮ ಭಾರತದಲ್ಲಿ ಮಹಾವೀರ ಜಯಂತಿ ಸರ್ಕಾರಿ
ರಜಾ ದಿನವಾಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಕಛೇರಿಗಳು ಅಂದು ಕಾರ್ಯ ನಿರ್ವಹಿಸುವುದಿಲ್ಲ.
ಜೈನರು ತಾವು ಹೊಂದಿರುವ ಅಂಗಡಿ ಮುಂಗಟ್ಟುಗಳನ್ನು ಸಹ ಅಂದು ಮುಚ್ಚಿ ಸಂತೋಷವಾಗಿ ಮನೆಯಲ್ಲಿ ಹಬ್ಬ
ಮಾಡಿ ತಮ್ಮ ಕುಟುಂಬದವರು ಮತ್ತು ಬಂಧು ಬಾಂಧವರ ಜೊತೆ ಖುಷಿಯಾಗಿ ಕಾಲ ಕಳೆಯುತ್ತಾರೆ.