ಭಾರತೀಯ ವಾಯುಪಡೆ ದಿನ
ನಮ್ಮ ದೇಶದ ರಕ್ಷಣಾ ಪಡೆಯಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಎಂಬ ಮೂರು ಪ್ರಮುಖ ವಿಭಾಗಗಳಿವೆ.
ಇವು ಭಾರತದ ರಕ್ಷಣೆಗೆ ಕಟಿಬದ್ಧವಾಗಿ ನಿಂತಿವೆ. ಶತ್ರುಗಳ ಯಾವುದೇ ರೀತಿಯ ದಾಳಿಯನ್ನು ಎದುರಿಸಲು
ಇವು ಸಮರ್ಥವಾಗಿವೆ. ಈ ಮೂರು ಸೇನಾಪಡೆಗಳ ಪೈಕಿ ವಾಯುಪಡೆಯು ಇಂದು ಅಂದರೆ ಅಕ್ಟೋಬರ್ 8 ರಂದು ಏರ್ ಫೋರ್ಸ್ ಡೇಯನ್ನು ಆಚರಿಸಿಕೊಳ್ಳುತ್ತಿದೆ.
ಪ್ರತಿವರ್ಷವೂ ಈ ದಿನವನ್ನು ಇಂಡಿಯನ್ ಏರ್ ಫೋರ್ಸ್ ಡೇಯನ್ನಾಗಿ ಆಚರಿಸಲಾಗುತ್ತದೆ. ಈ
ದಿನದಂದು ವಾಯುಪಡೆಯ ಸೈನಿಕರು ಸಾಂಪ್ರದಾಯಿಕ ಕವಾಯತುಗಳನ್ನು ಪ್ರದರ್ಶಿಸುತ್ತಾರೆ ಮತ್ತು ಭಾರತದ
ಯುದ್ಧ ವಿಮಾನಗಳ ಮತ್ತು ಹೆಲಿಕಾಪ್ಟರ್‌ಗಳ ಪ್ರದರ್ಶನವೂ ಈ ಸಂದರ್ಭದಲ್ಲಿ ನಡೆಯುತ್ತದೆ. ಈ ದಿನ
ದೇಶ ಸೇವೆಯ ವೇಳೆಗೆ ಹುತಾತ್ಮರಾದ ವಾಯುಪಡೆಯ ಸೈನಿಕರನ್ನು ಸ್ಮರಿಸಿ ಅವರಿಗೆ ಗೌರವ ನೀಡುವ
ಕಾರ್ಯಕ್ರಮಗಳು ನಡೆಯುತ್ತವೆ.
ಭಾರತೀಯ ವಾಯುಪಡೆ ದಿನವನ್ನು ಪ್ರಥಮ ಬಾರಿಗೆ 1932, ಅಕ್ಟೋಬರ್ 8 ರಂದು ಆಚರಿಸಲಾಯಿತು. ಅಲ್ಲಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ ಭಾರತವು 85ನೇ ವರ್ಷದ ವಾಯುಪಡೆ ದಿನವನ್ನು ಆಚರಿಸುತ್ತಿದೆ. ನೆರೆ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ವಾಯುಪಡೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ವಾಯುಪಡೆಯು ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಷನ್ ವಿಜಯ್, ಆಪರೇಷನ್ ಮೇಘದೂತ್, ಆಪರೇಷನ್ ಕ್ಯಾಕ್ಟಸ್, ಆಪರೇಷನ್ ಪೂಮಲೈ, ಆಪರೇಷನ್ ರಾಹತ್ ಇತ್ಯಾದಿಗಳು ಅತ್ಯಂತ ಪ್ರಮುಖವಾಗಿವೆ. ಇದಲ್ಲದೆ ದೇಶದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಭಯೋತ್ಪಾದಕರ ದಾಳಿ ನಡೆದಾಗ, ಗಲಭೆಗಳು ನಡೆದಾಗ ಪ್ರಾಣಾಪಾಯದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯವನ್ನೂ ವಾಯುಸೇನೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.