ಮುಡುಕುತೊರೆಯು ಮೈಸೂರು ಜಿಲ್ಲೆಯಲ್ಲಿರುವ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ತಲಕಾಡಿನಿಂದ ಉತ್ತರಕ್ಕೆ ೫ ಕಿ.ಮೀ ದೂರದಲ್ಲಿದೆ. ಇಲ್ಲಿ ಒಂದು ಬೆಟ್ಟದ ಮೇಲೆ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಗಂಗ ಅರಸರ ಕಾಲದ ಮೂಲ ದೇವಾಲಯವಿದ್ದು, ನಂತರ ವಿಜಯನಗರದ ವಾಸ್ತು ಶೈಲಿಯಲ್ಲಿ ಜೀರ್ಣೋದ್ಧಾರವಾಗಿದೆ. ದೇವಸ್ಥಾನದ ಪಶ್ಚಿಮದಲ್ಲಿರುವ ದ್ವಾರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಾಣವಾಗಿದೆ. ಇಲ್ಲಿ ಬೆಟ್ಟದ ಮೇಲಿನಿಂದ ಕಾಣುವ ಕಾವೇರಿ ಕೊಳ್ಳದ ನೋಟ ನಯನ ಮನೋಹರ. ದೇವಾಲಯವನ್ನು ತಲುಪಲು ರಸ್ತೆಯ ಸೌಲಭ್ಯವಿದೆ ಹಾಗು ಬೆಟ್ಟವನ್ನು ಹತ್ತಲು ಮೆಟ್ಟಿಲುಗಳ ವ್ಯವಸ್ಥೆಯಿದೆ. ಮೈಸೂರು ಜಿಲ್ಲೆ ತಿರುಮಕೂಡ್ಲು ನರಸೀಪುರ ತಾಲ್ಲೂಕು ಮುಡುಕುತೊರೆಯಲ್ಲಿ ಕಾವೇರಿ ತೀರದ ಬೆಟ್ಟದ ಮೇಲಿದೆ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಭ್ರಮರಾಂಬಿಕ ದೇವಾಲಯ.
ಸ್ಥಳ ಮಹಾತ್ಮೆ
ಮಹಾಭಾರತ ಕಾಲದಲ್ಲಿ ಅರ್ಜುನ ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಈ ಮಾರ್ಗವಾಗಿ ಸಂಚರಿಸುವಾಗ ಮಲ್ಲಿಕಾ ಎಂಬ ಪುಷ್ಪದಿಂದ ಶಿವಲಿಂಗಕ್ಕೆ ಅರ್ಚನೆ ಮಾಡಿದ್ದ. ಅದಕ್ಕಾಗಿಯೇ ಈ ದೇವರಿಗೆ ಮಲ್ಲಿಕಾರ್ಜುನ ಎಂಬ ಹೆಸರು ಬಂತು ಎನ್ನುತ್ತದೆ ಸ್ಥಳ ಮಹಾತ್ಮೆ. ತಲಕಾಡು ಪಂಚಲಿಂಗ ದರ್ಶನದ ಪಂಚಲಿಂಗಗಳಲ್ಲಿ ಇದೂ ಒಂದು. ಈ ಬೆಟ್ಟದ ತಪ್ಪಲಿನಲ್ಲಿ ಬೆಟ್ಟಹಳ್ಳಿ ಮಾರಮ್ಮನ ದೇವಸ್ಥಾನ ಕೂಡ ಇದೆ.
ಬೆಟ್ಟದ ಮೇಲೆ ನಿಂತು ನೋಡಿದರೆ ಕಾವೇರಿ ನದಿಯು ಹರಿಯುವ ರಮಣೀಯ ದೃಶ್ಯವನ್ನು ಕಾಣಬಹುದು. ಸುತ್ತಮುತ್ತ ಗದ್ದೆಗಳು, ತೋಪುಗಳು ಪುಟ್ಟ ಪುಟ್ಟ ದ್ವೀಪದಂತೆ ಗೋಚರಿಸುತ್ತವೆ. ಇಲ್ಲಿ ವರ್ಷಕ್ಕೊಮ್ಮೆ ರಥೋತ್ಸವ. ಲಕ್ಷಾಂತರ ಜನ ಸೇರುತ್ತಾರೆ. ಇನ್ನೊಂದು ವಿಶೇಷವೆಂದರೆ ಮಲ್ಲಿಕಾರ್ಜುನ ರಥೋತ್ಸವಕ್ಕೆ ಒಂದು ವಾರ ಮುಂಚೆ ದನಗಳ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಸುತ್ತಮುತ್ತಲಿನ ರೈತರು ಬಂದು ತಮಗೆ ಬೇಕಾದ ಯೋಗ್ಯ ರಾಸುಗಳನ್ನು ಕೊಂಡುಕೊಳ್ಳುತ್ತಾರೆ. ಕೊಂಡ ರಾಸುಗಳಿಗೆ ಅಲಂಕಾರ ಮಾಡಿ ಅವುಗಳನ್ನು ಮೆರವಣಿಗೆಯಲ್ಲಿ ಒಯ್ಯುತ್ತಾರೆ.